ನ್ಯೂಸ್

ಜಾಲತಾಣದಲ್ಲಿ ನಕಲಿ ಮಾಹಿತಿ: ಆರೋಪಿ ಬಂಧನ

ಮೈಸೂರು: ಲಿಂಗಾಯತರ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರಿಕೆ ಮಾಹಿತಿ ಹರಡುತ್ತಿದ್ದ ವ್ಯಕ್ತಿಯನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇವೆ. ಲಿಂಗಾಯತರ ಅಗತ್ಯವಿಲ್ಲ ಎಂದು ಬಿ.ಎಲ್.ಸಂತೋಷ್ ಭಾಷಣ ಮಾಡಿದ ಸುದ್ದಿ ಎಂದು ನಕಲಿ ಪತ್ರಿಕೆಯ ತುಣುಕನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಂಡು ಪ್ರಸಾರ ಮಾಡಲಾಗುತ್ತಿತ್ತು. ಈ ಬಗ್ಗೆ ಬಿಜೆಪಿ ಮುಖಂಡ ಬಿ.ನಿರಂಜನಮೂರ್ತಿ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪತ್ತೆ ಕಾರ್ಯಕ್ಕೆ ಸಿಬ್ಬಂದಿಯನ್ನು ನಗರ ಪೊಲೀಸ್ ಕಮೀಷನರ್ ಬಿ. ರಮೇಶ್ ಪ್ರಶಂಸಿಸಿದ್ದಾರೆ.