ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಜಿಲ್ಲೆಯಲ್ಲಿ ಇತ್ತೀಚೆಗೆ ನೊಣಗಳ ಹಾವಳಿ ಹೆಚ್ಚಾಗಿದ್ದು, ಸೊಳ್ಳೆಗಳ ಹಾವಳಿ ಜೊತೆಗೆ ನೊಣಗಳ ಹಾವಳಿಯಿಂದ ಜಾನುವಾರುಗಳ ಮೇಲೆ ಅಡ್ಡಪರಿಣಾಮ ಉಂಟಾಗಿದ್ದು, ಪಶುಪಾಲಕರು ಆತಂಕ ಪಡುವಂತಾಗಿದೆ.
ಪ್ರತಿವರ್ಷ ನವೆಂಬರ್-ಡಿಸೆAಬರ್ ಮತ್ತು ಜನವರಿ ತಿಂಗಳಿನಲ್ಲಿ ಭೂಮಿ ಮೇಲೆ ಹಸಿರು ಹೆಚ್ಚಾಗುತ್ತದೆ. ಹಸಿರಿಗೆ ಸೊಳ್ಳೆ ಮತ್ತು ನೊಣಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ. ಜನರು ನೊಣ ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಾರೆ. ಜಾನುವಾರುಗಳಿಗೆ ಯಾವುದೇ ಭದ್ರತೆಯನ್ನು ಪಡಿಸದೆ ಇರುವುದರಿಂದ ರಾತ್ರಿ ವೇಳೆ ಸೊಳ್ಳೆಗಳ ಕಾಟವಾಗದರೆ ಹಗಲಿನ ವೇಳೆ ನೊಣಗಳ ಕಾಟ ಕಾಡುತ್ತಿದೆ.
ರಾತ್ರಿ ವೇಳೆ ಸೊಳ್ಳೆಗಳು ಕಚ್ಚಿ ಗಾಯಗೊಳಿಸಿದರೆ ಹಗಲಿನ ವೇಳೆ ನೊಣಗಳು ಆ ಗಾಯವನ್ನು ದೊಡ್ಡದು ಮಾಡಿ ರಕ್ತ ಸೋರುವಂತೆ ಮಾಡುತ್ತವೆ. ಇದರಿಂದ ಜಾನುವಾರುಗಳ ದೇಹಕ್ಕೆ ವೈರಾಣುಗಳು ಸೇರಿ ರೋಗ ರುಜಿನಗಳಿಗೆ ತುತ್ತಾಗುತ್ತಿವೆ. ವಿಶೇಷವಾಗಿ ಸೀಮೆ ಹಸುಗಳ ಚರ್ಮ ತೆಳುವಾಗಿರುವ ಕಾರಣ ಬಹುಬೇಗ ಸೇಮೆ ಹಸುಗಳಿಗೆ ರೋಗಗಳು ಸೊಳ್ಳೆ ಮತ್ತು ನೊಣಗಳಿಂದ ಬರುವ ಸಾಧ್ಯತೆ ಹೆಚ್ಚಾಗಿವೆ.
ಮೂರು ತಿಂಗಳುಗಳ ಕಾಲ ಸೊಳ್ಳೆ ಮತ್ತು ನೊಣಗಳಿಂದ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಪಶುಪಾಲಕರ ಮೇಲಿದೆ. ಜಾನುವಾರುಗಳಿಗೆ ದನದ ಶೆಡ್ಡುಗಳನ್ನು ನಿರ್ಮಾಣ ಮಾಡಿಕೊಳ್ಳದೆ ಮನೆಗಳ ಮುಂಭಾಗವೇ ಬೀದಿಯಲ್ಲಿ ಕಟ್ಟಿಹಾಕುವಂತಹ ಪಶುಪಾಲಕರೇ ಹೆಚ್ಚಾಗಿದ್ದು, ನೊಣ ಮತ್ತು ಸೊಳ್ಳೆಗಳಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.
ಜಿಲ್ಲೆಯಲ್ಲಿ ಕೋಳಿ ಫಾರಂಗಳು ಹೆಚ್ಚಾಗಿರುವ ಕಾರಣ ಕೋಳಿಗಳು ಫಾರಂನಲ್ಲಿ ಖಾಲಿಯಾದಾಗ ಅಲ್ಲಿನ ನೊಣಗಳು ಗ್ರಾಮಗಳೊಳಗೆ ಪ್ರವೇಶ ಮಾಡುತ್ತವೆ. ಮನೆಗಳ ಮುಂಭಾಗ ಕಟ್ಟಿಹಾಕಿರುವ ಜಾನುವಾರುಗಳ ಮೇಲೆ ಕುಳಿತು ಗಾಯಗೊಳಿಸುವಂತಹ ಕೆಲಸ ಮಾಡುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ರೋಗದ ಲಕ್ಷಣಗಳು :
ಸೊಳ್ಳೆ ಮತ್ತು ನೊಣದ ಕಾಟಕ್ಕೆ ಬಲಿಯಾಗುವ ಜಾನುವಾರುಗಳ ಬೆಳವಣಿಗೆ ಕ್ಷೀಣಿಸುತ್ತದೆ. ಸೊಳ್ಳೆ ಕಚ್ಚಿದ ಗಾಯದ ಮೇಲೆ ನೊಣವೂ ಕುಳಿತು ಗಾಯಗೊಳಿಸುವುದರಿಂದ ಆ ಜಾನುವಾರಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಹಾಲು ಕರೆಯುವ ಹಸುವಿನಲ್ಲಿ ಕಾಣಿಸಕೊಂಡರೆ ಹಾಲು ಕಡಿಮೆಯಾಗುತ್ತದೆ. ವಿಶೇಷವಾಗಿ ಸೀಮೆ ಹಸುಗಳಿಗೆ ಬೂಸ, ಇಂಡಿ ಇಂತಹ ಪದಾರ್ಥಗಳಲ್ಲಿ ಸಿಹಿ ಮಿಶ್ರಣವಾಗುವುದರಿಂದ ನೊಣಗಳು ಜಾನುವಾರುಗಳ ಮೇಲೆ ಹೆಚ್ಚಾಗಿ ಕುಳಿತುಕೊಳ್ಳುತ್ತವೆ.
ಕೋಟ್
ಪ್ರತಿ ಗ್ರಾಮದ ಬಳಿಯು ಒಂದೆರಡು ಕೋಳಿ ಫಾರಂಗಳು ಇದ್ದೇ ಇರುತ್ತವೆ. ಕೋಳಿಗಳನ್ನು ಮಾರಾಟ ಮಾಡಿದ ನಂತರ ಮತ್ತೊಂದು ಕೋಳಿಯ ಬ್ಯಾಚ್ ಬರುವ ತನಕ ಅಲ್ಲಿನ ನೊಣಗಳು ಗ್ರಾಮಗಳ ಒಳಗೆ ಪ್ರವೇಶ ಮಾಡುತ್ತವೆ. ಸೊಳ್ಳೆಗಳ ಜೊತೆಗೆ ನೊಣಗಳು ಜಾನುವಾರುಗಳ ಮೇಲೆ ಕುಳಿತು ಕಚ್ಚಿ ಗಾಯಗೊಳಿಸುತ್ತವೆ. ಭೂಟೆಕ್ಸ್ ಎಂಬ ಔಷಧಿಯ ಸಿಂಪಡಣೆ ಮಾಡಿದರೆ ತಕ್ಷಣಕ್ಕೆ ಪರಿಹಾರ ಸಿಗುತ್ತದೆ. ಹಸುವಿನ ಚರ್ಮದ ದಪ್ಪ ಕಡಿಮೆ ಇರುವ ಕಾರಣ ಪದೇ ಪದೇ ಈ ಔಷಧಿಯನ್ನು ಸಿಂಪಡಣೆ ಮಾಡುವುದರಿಂದ ಹಸುವಿನ ಬೆಳವಣಿಗೆಯು ಕಡಿಮೆಯಾಗಿ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಗ್ರಾಮ ಪಂಚಾಯ್ತಿಯವರು ನೊಣಗಳ ಮತ್ತು ಸೊಳ್ಳೆಗಳ ಹಾವಳಿಯನ್ನು ನಿಯಂತ್ರಣ ಮಾಡಬೇಕಾಗಿದೆ.
-ಮುನಿವೆಂಕಟಪ್ಪ, ರೈತ, ವಾನರಾಶಿ
ಕೋಟ್
ಭೂಮಿಯ ಮೇಲೆ ಹರಿಸಿರು ಹೆಚ್ಚಾದಾಗ ಸೊಳ್ಳೆ ಮತ್ತು ನೊಣಗಳು ಹೆಚ್ಚಾಗುತ್ತವೆ. ಸೊಳ್ಳೆ ಪರದೆಯನ್ನು ಅಳವಡಿಸಿಕೊಂಡು ರಕ್ಷಣೆ ಮಾಡಿಕೊಳ್ಳಬೇಕು. ನೊಣಗಳ ಹಾವಳಿಗೆ ಭೂಟೆಕ್ಸ್ ಔಷಧಿಯನ್ನು ನೀರಿನಲ್ಲಿ ಬೆರಸಿ ಮೂರು ದಿನಕ್ಕೊಮ್ಮೆ ಸಿಂಪಡಣೆ ಮಾಡಬೇಕು. ಕೋಳಿ ಫಾರಂಗಳು ಹೆಚ್ಚಾಗಿರುವ ಕಾರಣ ನೊಣಗಳ ಸಂತತಿಯು ಹೆಚ್ಚಾಗುತ್ತದೆ. ದನದ ಕೊಠಡಿಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು. ಹಾಗೂ ರಾತ್ರಿ ವೇಳೆ ಬೇವಿನ ಸೊಪ್ಪಿನ ಹೊಗೆ ಹಾಕಿ ಸೊಳ್ಳೆಗಳ ನಿಯಂತ್ರವನ್ನು ಮಾಡಿಕೊಳ್ಳಬೇಕು.
-ಡಾ.ಟಿ.ರಾಮಯ್ಯ, ಉಪನಿರ್ದೇಶಕರು ಪಶುಪಾಲನ ಇಲಾಖೆ.
ಚಿತ್ರ ೧೦ ಕೆ.ಎಲ್.ಆರ್. ೦೨ : ಸೀಮೆಹಸುಗಳ ಮೇಲೆ ನೊಣಗಳು ಕುಳಿತಿರುವುದು.
ಚಿತ್ರ ೧೦ ಕೆ.ಎಲ್.ಆರ್. ೦೨ಎ : ಮುನಿವೆಂಕಟಪ್ಪ, ರೈತ, ವಾನರಾಶಿ ರವರ ಭಾವಚಿತ್ರ.
ಚಿತ್ರ ೧೦ ಕೆ.ಎಲ್.ಆರ್. ೦೨ಬಿ : ಡಾ.ಟಿ.ರಾಮಯ್ಯ, ಉಪನಿರ್ದೇಶಕರು, ಪಶುಪಾಲನ ಇಲಾಖೆ. ರವರ ಭಾವಚಿತ್ರ