ಓಣಿತೋಟ ರತ್ನಾಕರ್ 
ನ್ಯೂಸ್

ಜಾನಪದ ಸಮ್ಮೇಳನಕ್ಕೆ ಸಕಲ ಸಿದ್ಧತೆ

ಎನ್.ಆರ್.ಪುರ: ಜಿಲ್ಲಾ ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ ಜ.19 ರಂದು ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಓಣಿತೋಟ ರತ್ನಾಕರ್ ತಿಳಿಸಿದರು.

72 ವರ್ಷದ ಹಿರಿಯ ಅಂಟಿಕೆ-ಪಿಂಟಿಕೆ ಕಲಾವಿದರಾದ ಸುರೇಂದ್ರ ಯಡದಾಳ್ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಕನ್ನಡ ಪ್ರಥಮ ಜಾನಪದ ಪರಿಷತ್‌ನ ಸಮ್ಮೇಳನಕ್ಕಾಗಿ ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದ್ದು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಎ.ಎಸ್.ನಯನ ಹಾಗೂ ಗೌರವಾಧ್ಯಕ್ಷರಾಗಿ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆಯಾಗಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಕನ್ನಡ ಜಾನಪದ ಸಮ್ಮೇಳನದಲ್ಲಿ ಜಾನಪದ ಕಲಾವಿದರು ಹಾಗೂ ಆಸಕ್ತರು ಸೇರಿ 2 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂದು ಬೆಳಗ್ಗೆ 9 ಗಂಟೆಗೆ ಶೃಂಗೇರಿ ಶಾರದಾ ಮಠದಿಂದ ಸಮ್ಮೇಳನ ನಡೆಯುವ ಮೆಣಸೆಯವರೆಗೆ ಸಮ್ಮೇಳಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಲಿದ್ದು ರಾಜ್ಯ ಕನ್ನಡ ಜಾನಪದ ಪರಿಷತ್‌ನ ಅಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಜಾನಪದಗೋಷ್ಠಿ ನಡೆಯಲಿದ್ದು ರಂಗೋಲಿಯಲ್ಲಿ ಪರಿಸರ ಪ್ರಜ್ಞೆ, ಮಲೆನಾಡಿನ ಜಾನಪದ ಕಲೆಗಳು ಹಾಗೂ ಮಹಿಳಾ ಜಾನಪದ ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ.

ಮಧ್ಯಾಹ್ನ 2ಕ್ಕೆ ಜಾನಪದ ಕಲಾವಿದರಿಂದ ಕಲೆಯ ಪ್ರದರ್ಶನ ನಡೆಯಲಿದ್ದು ತರೀಕೆರೆ ತಾಲೂಕಿನ ಕಲಾವಿದರಿಂದ ವೀರಗಾಸೆ, ಅಜ್ಜಂಪುರದ ಕಲಾವಿದರಿಂದ ಡೊಳ್ಳು ಕುಣಿತ, ಚಿಕ್ಕಮಗಳೂರು ತಾಲೂಕಿನಿಂದ ಸೋಬಾನೆ, ಎನ್.ಆರ್.ಪುರ ಕಲಾವಿದರಿಂದ ಭಜನೆ, ಜಾನಪದ ನೃತ್ಯ, ಕೊಪ್ಪದ ಬರ್ಕನಘಟ್ಟದ 30 ಕಲಾವಿದರಿಂದ ಕೋಲಾಟ ಪ್ರದರ್ಶನ ನಡೆಯಲಿದೆ.

ಕಡೂರು ತಾಲೂಕಿನ ವೀರಗಾಸೆ ಕಲಾವಿದ ನವೀನ್ ಕುಮಾರ್ ಹಾಗೂ ಕೊಪ್ಪ ತಾಲೂಕಿನ ಜಾನಪದ ಕಲಾವಿದ ಬಲಗಾರು ಗಣೇಶ್ ಅವರಿಗೆ ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಸಂಜೆ 7ಕ್ಕೆ ನಾರ್ವೆಯ ಚಂಡಿಕೇಶ್ವರಿ ಅಂಟಿಕೆ ಪಿಂಟಿಕೆ ಕಲಾವಿದರು ಹಾಗೂ ಯಡದಾಳು ಗೆಳಯರ ಬಳಗದಿಂದ ಅಂಟಿಕೆ ಪಿಂಟಿಕೆ ಪ್ರದರ್ಶನ ಹಾಗೂ ಶೃಂಗೇರಿ ಅಕ್ಷರ ಮ್ಯೂಸಿಕಲ್ ಕಲಾವಿದರಿಂದ ಸ್ಯಾಕೋ್ಸೆೆನ್ ವಾದನ ನಡೆಯಲಿದೆ.

ಸಮ್ಮೇಳನಕ್ಕೆ ಶೃಂಗೇರಿ ಶಾರದ ಪೀಠದಿಂದ ಭೋಜನದ ವ್ಯವಸ್ಥೆ ಹಾಗೂ ಆದಿಚುಂಚನಗಿರಿ ಮಠದಿಂದ ಪಾರಿತೋಷಕ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸದಸ್ಯರಾದ ಕೆ.ಎಂ.ಸುಂದರೇಶ್, ಎಸ್.ಡಿ.ರಾಜೇಂದ್ರ, ತಾಲೂಕು ಕನ್ನಡ ಜಾನಪದ ಪರಿಷತ್‌ನ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಅಭಿಲಾಷ್, ಮಹಿಳಾ ಘಟಕದ ಜಯಂತಿ ಇದ್ದರು.