ನ್ಯೂಸ್

ಜಾನಪದ ವಿದ್ಯಾರ್ಥಿಗಳತ್ತ ಕೊಂಡೊಯ್ಯುವ ಕೆಲಸ ಜಾನಪದ ಅಕಾಡೆಮಿ ವಿಶೇಷ ಕಾರ್ಯಕ್ರಮವಾಗಿ ಹಮ್ಮಿಕೊಳ್ಳಲಾಗುವುದು / ಗೊಲ್ಲಹಳ್ಳಿ ಶಿವಪ್ರಸಾದ್

ವಿಜಯವಾಣಿ ಸುದ್ದಿಜಾಲ ಕೋಲಾರ

ಜಾನಪದವನ್ನು ವಿದ್ಯಾರ್ಥಿಗಳತ್ತ ಕೊಂಡೊಯ್ಯುವ ಕೆಲಸವನ್ನು ಜಾನಪದ ಅಕಾಡೆಮಿ ವಿಶೇಷ ಕಾರ್ಯಕ್ರಮವಾಗಿ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಮತ್ತು ಆದಿಮ ಸಾಂಸ್ಕೃತಿಕ ಕೇಂದ್ರ ಕೋಲಾರ. ಸಹಯೋಗದಲ್ಲಿ ೨೧೨ ಹುಣ್ಣಿಮೆ ಹಾಡು ಪ್ರಯುಕ್ತ ತೇರಹಳ್ಳಿ ಬೆಟ್ಟದಲ್ಲಿ ಭಾನುವಾರ ರಾತ್ರಿ ನಾದವಾಲಿಸೇ ಮನಸೇ ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. .

ಜಾನಪದ ಅಕಾಡೆಮಿ ವಿಶೇಷ ಕಾರ್ಯಕ್ರಮವಾಗಿ ಈಗಾಗಲೇ ತುಮಕೂರಿನ ಶಿರಾ ಮತ್ತು ಗೌರಿಬಿದನೂರಿನಲ್ಲಿ ಯಶಸ್ವಿಯಾಗಿದೆ. ಆ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಎಲ್ಲಾ ಜಿಲ್ಲಾ, ತಾಲ್ಲೂಕುಗಳಲ್ಲಿ ಏರ್ಪಡಿಸುವ ಯೋಜನೆ ರೂಪಿಸಿದ್ದೇವೆ. ಅದಕ್ಕೆ ಜಾನಪದದ ನಡೆ, ವಿದ್ಯಾರ್ಥಿಗಳ ಕಡೆ ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಪ್ರತಿ ಹಳ್ಳಿಯಲ್ಲೂ ಜಾನಪದ ಹಾಗೂ ರಂಗಭೂಮಿ ಕಲಾವಿದರಿದ್ದಾರೆ. ಅವರು ತೆಲುಗಿನಲ್ಲಿ ಪ್ರಸ್ತುತಿ ಪಡೆಸುವುದರಿಂದ ಅಕಾಡೆಮಿಗಳು ಅವರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಅಕಾಡೆಮಿ ಅಧ್ಯಕ್ಷರು, ರಿಜಿಸ್ಟ್ರಾರ್ ತಕ್ಕ ತೀರ್ಮಾನವನ್ನು ತೆಗೆದುಕೊಂಡು ಸರ್ಕಾರ ಕೊಡು ಮಾಡುವ ಎಲ್ಲಾ ಸವಲತ್ತುಗಳು ಲಭಿಸುವಂತೆ ಮಾಡಬೇಕಾಗಿ ಕೋರಿದರು.

ಹಿರಿಯ ಜಾನಪದ ವಿಷಯ ತಜ್ಞರಾದ ಕುರುವ ಬಸವರಾಜ್ ಜೀವಪರ ಜಾನಪದ ಹೇಗೆ ಪರಿಣಾಮಕಾರಿಯಾಗಿ ಜನರ ನಡುವೆ ಹುಟ್ಟಿಕೊಂಡಿತು, ಅದರ ಹಿನ್ನೆಲೆ ಹಾಗೂ ಬೆಳವಣಿಗೆಯ ಬಗ್ಗೆ ಸವಿಸ್ತಾರವಾದ ಉಪನ್ಯಾಸವನ್ನು ನೀಡಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನಾ.ಮುನಿರಾಜು ಮಾತನಾಡಿ, ಆದಿಮ ಬೆಳವಣಿಗೆ ಹಾಗೂ ಪ್ರಸ್ತುತಿ ಪಡಿಸುತ್ತಿರುವ ಕಾರ್ಯಕ್ರಮಗಳ ಕುರಿತು ಶ್ಲಾಘಿಸಿದರು. ದೇಶ ವಿದೇಶಗಳಲ್ಲಿ ಇರುವ ಅವರ ವಿದ್ಯಾರ್ಥಿಗಳು ಆದಿಮ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಆದಿಮ ನಮ್ಮ ಭಾಗದಲ್ಲಿ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಅನೇಕ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ತಿಂಗಳಿಗೊಮ್ಮೆ ನಡೆಯುವ ಹುಣ್ಣಿಮೆ ಹಾಡು ೨೧೨ ಕ್ಕೆ ತಲುಪಿದೆ. ಹೀಗೆಯೇ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಮುನಿಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ (ಪ್ರ) ನಮ್ರತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಉಪ ನಿರ್ದೇಶಕಿ ವಿಜಯಲಕ್ಷ್ಮಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಡಿ.ಆರ್. ರಾಜಪ್ಪ, ನೀಲಕಂಠೇಗೌಡ, ಆ.ಮಾ.ರಾಮಚಂದ್ರ, ಕಲಾವಿದ ಕಾಳಿದಾಸ್, ರಂಗಕರ್ಮಿ ನಾವೆಂಕಿ ಮುಂತಾದವರು ಉಪಸ್ಥತತಿದ್ದರು.

ಚಿತ್ರ ೧೬ ಕೆ.ಎಲ್.ಆರ್. ೦೩ : ತೇರಹಳ್ಳಿ ಬೆಟ್ಟದ ಆದಿಮ ಕೇಂದ್ರದಲ್ಲಿ ತಿಂಗಳ ಹುಣ್ಣಿಮೆ ಹಾಡು ಪ್ರಯುಕ್ತ ನಡೆದ ನಾದವಾಲಿಸೇ ಮನಸೇ ಎಂಬ ಶೀರ್ಷಿಕೆಯಡಿಯಲ್ಲಿ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭರತನಾಟ್ಯವನ್ನು ಪ್ರದಶಿಸುತ್ತಿರುವುದು.