ತರೀಕೆರೆ ತಾಲೂಕು ಬೆಟ್ಟತಾವರಕೆರೆಯಲ್ಲಿ ಏರ್ಪಡಿಸಿದ್ದ ತೃತೀಯ ತಾಲೂಕು ಜಾನಪದ ಸಮ್ಮೇಳನವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಜಿ.ಬಿ.ಸುರೇಶ್, ಬಿ.ವಿ.ಜಯಣ್ಣ, ಚಟ್ನಳ್ಳಿ ಮಹೇಶ್, ಎಚ್.ಎಸ್.ರಾಜಶೇಖರ್ ಇತರರಿದ್ದರು. 
ನ್ಯೂಸ್

ಜಾನಪದ ಭಾರತೀಯ ಸಂಸ್ಕೃತಿಯ ಬೆನ್ನೆಲುಬು

ತರೀಕೆರೆ: ದೇಸಿ ಕಲೆ ಜೀವಂತವಿರಿಸಲು ಕರ್ನಾಟಕ ಜಾನಪದ ಪರಿಷತ್ ಟೊಂಕಕಟ್ಟಿ ನಿಂತಿದ್ದು ಗ್ರಾಮೀಣ ಜನರು ಅದಕ್ಕೆ ಬೇಕಾದ ಸ್ಪಂದನೆ ನೀಡಿ ಪೋಷಿಸುತ್ತಿದ್ದಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಬೆಟ್ಟತಾವರಕೆರೆ ಗ್ರಾಮದ ಶ್ರೀಗೌರಮ್ಮ ದೇವಿ ಸಮುದಾಯ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಹೊಸ ಚಿಗರು, ಹಳೇ ಬೇರು ಕೂಡಿರಲು ಮರ ಸೊಬಗು ಎನ್ನುವ ಹಾಗೆ ಜಾನಪದ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಬೆನ್ನೆಲುಬು. ಕೌಟುಂಬಿಕ ಸಂಬಂಧಗಳಲ್ಲಿ ಹೊಂದಾಣಿಕೆ ಮನೋಭಾವ ಜಾನಪದ ಮೂಡಿಸುತ್ತದಲ್ಲದೆ ಪ್ರತಿಯೊಬ್ಬರ ಆರೋಗ್ಯ, ಸಮೃದ್ಧಿಯಲ್ಲೂ ಜಾನಪದ ಪ್ರಮುಖ ಪಾತ್ರವಹಿಸಲಿದೆ ಎಂದರು.

ಇಂದಿನ ಪೀಳಿಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಲು ಜಾನಪದ ಅಪಾರ ಕೊಡುಗೆ ನೀಡುತ್ತಿದೆ. ಹಿರಿಯರಾದ ನಾವು ಜಾನಪದದ ಮಹತ್ವದ ಜತೆ ಕಲೆ, ಸಾಹಿತ್ಯದ ಪರಿಚಯವನ್ನು ಅವರಿಗೆ ತಿಳಿಸಿಕೊಡಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ 8 ವರ್ಷಗಳಿಂದ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ತಾಲೂಕು ಕೇಂದ್ರ ಮಾತ್ರವಲ್ಲ, ಹೋಬಳಿ, ಗ್ರಾಮಾಂತರ ಪ್ರದೇಶಗಳಲ್ಲಿ ಜಾನಪದ ತರಬೇತಿ ಶಿಬಿರ, ಗೋಷ್ಠಿ, ಜಾನಪದ ಕಲೋತ್ಸವ ಹೀಗೆ ಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾನಪದ ಸಾಹಿತ್ಯ, ಸಂಗೀತ, ಕಲೆ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಕಲೆಯ ಉಳಿವಿಗೆ ಪೂರಕ ಸಹಕಾರ ಸಿಗುತ್ತಿದ್ದು ಪಟ್ಟಣ ಪ್ರದೇಶಗಳಲ್ಲೂ ಸ್ಪಂದನೆ ಬೇಕಿದೆ. ತೃತೀಯ ತಾಲೂಕು ಸಮ್ಮೇಳನ ಅವಿಸ್ಮರಣೀಯಗೊಳಿಸುವ ಸಲುವಾಗಿ ಜಾನಪದ ಕಲಾಸಕ್ತರು ಹಗಲಿರುಳೂ ಶ್ರಮಿಸಿದ್ದು ಶಾಲಾ ಕಾಲೇಜುಗಳಲ್ಲಿ ಪಠ್ಯೇತರ ವಿಷಯವನ್ನಾಗಿ ಜಾನಪದ ಸಂಸ್ಕೃತಿ ಕಲೆಯನ್ನು ಕಲಿಸಬೇಕು ಎಂದರು.

ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮಾಳೇನಹಳ್ಳಿ ಬಸಪ್ಪ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಎಸ್.ರಾಜಶೇಖರ್, ಗೌರವಾಧ್ಯಕ್ಷ ಆರ್.ನಾಗೇಶ್, ಉಪಾಧ್ಯಕ್ಷ ಜಿ.ತಿಪ್ಪೇಶ್, ಪ್ರಮುಖರಾದ ಶಿವಣ್ಣ, ಮರುಳಸಿದ್ದಪ್ಪ, ಜಯಣ್ಣ, ಗಾಯತ್ರಮ್ಮ, ಆನಂದ್, ಶಿವಕುಮಾರ್, ಗೌರೀಶ್, ಶಿಕ್ಷಕರಾದ ನಂಜುಂಡಪ್ಪ, ಕಲ್ಲೇಶಪ್ಪ, ಬಿ.ಸಿ.ರುದ್ರಪ್ಪ ಮತ್ತಿತರರಿದ್ದರು.