ಅಜ್ಜಂಪುರ ತಾಲೂಕಿನ ಹಣ್ಣೆ ಮಠದ ಆವರಣದಲ್ಲಿ ತಾಲೂಕು 4ನೇ ಜಾನಪದ ಸಮ್ಮೇಳನವನ್ನು ಜಿಪಂ ಮಾಜಿ ಅಧ್ಯಕ್ಷ ಧ್ರುವಕುಮಾರ್ ಉದ್ಘಾಟಿಸಿದರು. ಶ್ರೀ ಮರಳುಸಿದ್ದ ಪಂಡಿತಾರಾಧ್ಯ ಸ್ವಾಮೀಜಿ, ಶಂಕರಪ್ಪ, ಜಿ.ಬಿ.ಸುರೇಶ್, ಮೇಕನಗದ್ದೆ ಲಕ್ಷ್ಮಣ್ ಗೌಡ, ಚಂದ್ರಪ್ಪ, ತಿಪ್ಪೇಶ್ ಇತರರಿದ್ದರು.  
ನ್ಯೂಸ್

ಜಾನಪದ ಕಲಾವಿದರಿಗೆ ಆರ್ಥಿಕ ಸಹಕಾರ ನೀಡಿ

ಕಡೂರು: ಜಾನಪದದಲ್ಲೇ ಬದುಕು ಕಟ್ಟಿಕೊಳ್ಳುವ ಕಲಾವಿದರಿಗೆ ಜೀವನ ಭದ್ರತೆಗೆ ಸರ್ಕಾರದಿಂದ ಆರ್ಥಿಕ ಸಹಕಾರ ಅಗತ್ಯವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಶಂಕರಪ್ಪ ಹೇಳಿದರು.

ಅಜ್ಜಂಪುರ ತಾಲೂಕಿನ ಶ್ರೀಶೈಲ ಶಾಖಾಮಠ ಹಣ್ಣೆಮಠದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಭಾನುವಾರ ಏರ್ಪಡಿಸಿದ್ದ 4ನೇ ತಾಲೂಕು ಮಟ್ಟದ ಜಾನಪದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾನಪದ ಪೂರ್ವಿಕರ ಬಳುವಳಿಯಾಗಿ ಬಂದ ಕಲೆ. ಅದನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ನನ್ನ 40 ವರ್ಷಗಳ ಜಾನಪದ ಕಲಾ ಸೇವೆಗೆ ತಾಲೂಕು ಮಟ್ಟದ ಸಮ್ಮೇಳನಾಧ್ಯಕ್ಷತೆಯ ಜವಾಬ್ದಾರಿ ನೀಡಿರುವುದು ಸೇವೆಗೆ ಗೌರವ ನೀಡಿದಂತಾಗಿದೆ. ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಗೆ ಮತ್ತಷ್ಟು ಸೇವೆ ಸಲ್ಲಿಸಲು ಸ್ಫೂರ್ತಿ ದೊರಕಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಧ್ರುವಕುಮಾರ್ ಮಾತನಾಡಿ, ನಾಗರಿಕತೆಯ ಮೂಲ ಬೇರು ಜಾನಪದ. ವ್ಯಕ್ತಿತ್ವ ವಿಕಾಸಕ್ಕೆ ಮತ್ತು ನಾಗರಿಕನಾಗಿ ಸಮಾಜದ ಮುಖ್ಯವಾಹಿನಿಗೆ ಬರಲು, ಜಾನಪದ ಸಂಸ್ಕೃತಿ, ಸಾಹಿತ್ಯ, ಸಂಗೀತ ಕಲೆ, ಆಚಾರ ವಿಚಾರಗಳು ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದರು.

ಹಣ್ಣೆಮಠದ ಶ್ರೀ ಮರಳುಸಿದ್ದ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ಯಾವುದೇ ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಜಾನಪದ ಕಲೆ, ಸಾಹಿತ್ಯ, ಸಂಗೀತಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದರೆ ಜಾನಪದ ಸಂಸ್ಕೃತಿ ಮುಂದಿನ ತಲೆಮಾರುಗಳಲ್ಲಿ ನಿರಂತರವಾಗಿ ಸಾಗುತ್ತದೆ ಎಂದರು.

ಸಾಹಿತಿ ಮೇಕನಗದ್ದೆ ಲಕ್ಷ್ಮಣ್‌ಗೌಡ ಮಾತನಾಡಿ, ಜಾನಪದ ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಜಾನಪದ ಸಂಸ್ಕೃತಿ ಮತ್ತು ಭಾರತೀಯ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮುಂದಿನ ಪ್ರಜೆಗಳನ್ನು ಸುಸಂಸ್ಕೃತರನ್ನಾಗಿಸಲು ಜಾನಪದ ಸಾಹಿತ್ಯ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಸಾಹಿತಿಗಳಾದ ರಾಜಣ್ಣ, ಹೊಸೂರು ಪುಟ್ಟರಾಜ, ರಂಗ ಸಂಘಟಕ ಎ.ಸಿ.ಚಂದ್ರಪ್ಪ, ಜಾನಪದ ವಿದ್ವಾಂಸ ಬಸವರಾಜ ನೆಲ್ಲಿಸರ, ಉಪಾಧ್ಯಕ್ಷ ಗೊಂಡೆದಹಳ್ಳಿ ತಿಪ್ಪೇಶ, ಗಾಯಕ ಎ.ಆರ್.ನಾಗೇಶ, ಮರಳು ಸಿದ್ದಪ್ಪ, ಡಾ. ಮಾಳೇನಳ್ಳಿ ಬಸಪ್ಪ, ಕಸಾಪ ಅಧ್ಯಕ್ಷ ಎಚ್.ಸಿ. ಚಂದ್ರಪ್ಪ, ತಡಗ ಶಿವಕುಮಾರ್, ಮಹಾದೇವಪ್ಪ, ಎಲ್‌ಐಸಿ ಶಿವಕುಮಾರ್, ನಾರಾಯಣಪುರ ರಾಜಣ್ಣ, ದೇವರಾಜ್, ಭಕ್ತನಕಟ್ಟೆ ಲೋಕೇಶ್, ಚಿಕ್ಕನಿಲ್ಲೂರು ಜಯಣ್ಣ, ತಿಪ್ಪೇಶ್ ಚಿಕ್ಕಾನಂಗಲ, ಗ್ರಾಮಸ್ಥರು ಇದ್ದರು.