ವಿಜಯವಾಣಿ ಸುದ್ದಿಜಾಲ ಕೋಲಾರ
ಜಾತಿವಾರು ಸಮೀಕ್ಷೆಯಲ್ಲಿ ಸಮುದಾಯಕ್ಕೆ ತೊಂದರೆ ಆದರೆ ಸುಮ್ಮನೆ ಕೂರಲ್ಲ. ವಿವೇಚನೆ ಮಾಡಿ ವರದಿ ಕೊಡುವ ಮೂಲಕ ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ತುಮಕೂರಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಹೇಳಿದರು.
ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಬಾಲಕಿಯರ ವಸತಿ ನಿಲಯದ ಶಂಕುಸ್ಥಾಪನಾ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮುದಾಯದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ, ಶೈಕ್ಷಣಿಕ ನೆಪ ಇಟ್ಟುಕೊಂಡು ಸರ್ಕಾರವು ಸಮೀಕ್ಷೆ ನಡೆಸಿದೆ. ಆದರೆ ಅಲ್ಲಿ ಆಗಿರುವುದು ಸಂಪೂರ್ಣವಾಗಿ ಜಾತಿಸಮೀಕ್ಷೆ. ಹಿಂದಿನ ಪ್ರಯತ್ನಗಳೆಲ್ಲ ವಿಲವಾಗಿದ್ದು, ಗೊಂದಲದ ವರದಿ ನೀಡಿವೆ. ಈ ಭಾರಿ ಆ ರೀತಿ ಆಗಬಾರದು ಎಂದರು.
ಕೋಲಾರ ನಗರದಲ್ಲಿ ೧೦ ಕೋಟಿ ವೆಚ್ಚದಲ್ಲಿ ವಸತಿ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರ. ಸಂಘದಿAದ ಕೈಗೊಳ್ಳುವ ಕಾಮಗಾರಿಗಳನ್ನು ಟೆಂಡರ್ ಕರೆದು ಸಮುದಾಯದ ಅರ್ಹರಿಗೆ ಕೊಡಿ. ಮಾದರಿ ಸಂಘವಾಗಿ ಕಟ್ಟಬೇಕು. ಕೋಲಾರದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣಕ್ಕೆ ರಾಜ್ಯ ಸಂಘದ ಸಭೆಯಲ್ಲಿ ಚರ್ಚೆಸಿ ೫೦ ಲಕ್ಷ ಕೊಡಿ ಎಂದು ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದಲ್ಲಿ ಸುಮಾರು ೭೩೮ ಕೋಟಿ ಹಣವಿದ್ದು, ಕೇವಲ ಪುರಸ್ಕಾರ, ಸನ್ಮಾನಕ್ಕೆ ಸೀಮಿತವಾಗಬಾರದು. ಒಕ್ಕಲಿಗರ ಸಂಘ ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ನೆರವಿಗೆ ನಿಲ್ಲಬೇಕು. ಬಡ ವೈದ್ಯಕಿಯ ವಿದ್ಯಾರ್ಥಿಗಳಿಗೆ ೫ ಲಕ್ಷದಿಂದ ೧೦ ಲಕ್ಷ ರಿಯಾಯಿತಿ ಕೊಡಬೇಕು. ಎಸ್.ಎಂ.ಕೃಷ್ಣ ಹೆಸರಲ್ಲಿ ಎಂಜಿನಿಯರಿAಗ್ ಕಾಲೇಜು ಮಾಡಿ, ದೇವೇಗೌಡರ ಹೆಸರಲ್ಲಿ ವೈದ್ಯಕಿಯ ಕಾಲೇಜು ತೆರೆಯಿರಿ ಎಂಬುದಾಗಿ ಬಹಳ ಹಿಂದೆಯೇ ಹೇಳಿದ್ದೆ. ಬೆಂಗಳೂರಿಗೆ ಅವರ ಕೊಡುಗೆ ಬಹಳಷ್ಟಿದೆ ಎಂಬುದನ್ನು ಸ್ಮರಿಸಿದರು.
ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವುದು ಸಮುದಾಯವು ಅವಮಾನ ಎಂದು ಭಾವಿಸುತ್ತದೆ. ಆ ರೀತಿ ಆಗಬಾರದು. ಮೇಲಾಟ ನಡೆಯಬಾರದು. ಹಿಂದೆ ಕಾರ್ಯಕಾರಿ ಸಮಿತಿ ನಡೆಯುವಾಗ ಹೊರಗಡೆ ಪೊಲೀಸರನ್ನು ಇಟ್ಟುಕೊಂಡು ನಡೆಸಬೇಕಾದ ಪರಿಸ್ಥಿತಿ ಇತ್ತು. ಅಂಥ ವಾತಾವರಣ ಮರುಕಳುಹಿಸುವುದು ಬೇಡ. ರಾಜ್ಯ ಸಂಘದಲ್ಲಿ ಗುಂಪುಗಾರಿಕೆ ಬಿಟ್ಟು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಜಾನಪದ ಗಾಯಕ ಗೋ.ನಾ.ಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಿ.ಬೈರೇಗೌಡ ನಗರದಲ್ಲಿ ನಡೆದ ವಸತಿ ನಿಲಯ ಕಟ್ಟಡ ನಿಮಾರ್ಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ, ಎಂಎಲ್ಸಿ ಅನಿಲ್ ಕುಮಾರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶ್ವ ಮಾನವ ಮಹಾಸಂಸ್ಥಾನದ ಡಾ.ನಿಶ್ಚಲಾನಂದನಾಥಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಗೌರವಾಧ್ಯಕ್ಷ ಯಲುವಳ್ಳಿ ರಮೇಶ್, ನಿರ್ದೇಶಕ ಡಾ.ಡಿ.ಕೆ.ರಮೇಶ್, ಧರ್ಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಮುಖಂಡರಾದ ಸಿಎಂಆರ್ ಶ್ರೀನಾಥ್, ವಿ.ಕೃಷ್ಣಾರೆಡ್ಡಿ, ಡೆಕ್ಕನ್ ರಾಮಕೃಷ್ಣ, ಬಿಸಪ್ಪಗೌಡ, ಅ.ಮು.ಲಕ್ಷ್ಮಿನಾರಾಯಣ, ಲಕ್ಷö್ಮಣ್‌ಗೌಡ, ಸೀತಿಹೊಸೂರು ಮುರಳಿಗೌಡ, ಪ್ರಭಾಕರ್, ಪವನ್ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ, ನಗರಸಭೆ ಸದಸ್ಯರಾದ ಮುರಳಿಗೌಡ, ಪ್ರವಿಣಗೌಡ ಇದ್ದರು.
ಚಿತ್ರ ೦೫ ಕೆ.ಎಲ್.ಆರ್. ೦೩ : ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಬಾಲಕಿಯರ ವಸತಿ ನಿಲಯದ ಶಂಕುಸ್ಥಾಪನಾ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮುದಾಯದ ಸಾಧಕರನ್ನು ಸನ್ಮಾನಿಸಿದ ನಂಜಾವಧೂತ ಸ್ವಾಮೀಜಿ ಹಾಗೂ ಇತರರು.