ಸೋಮವಾರಪೇಟೆ: ಜಾತಿ ಜನಗಣತಿ ಜಾತಿ ಜಾತಿ ನಡುವೆ ವಿಷಬೀಜ ಬಿತ್ತಿ ಒಡೆದು ಆಳುವ ಹುನ್ನಾರವಾಗಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಟೀಕಿಸಿದ್ದಾರೆ.
ಜಾತಿ ಜನಗಣತಿ ಎಂಬುದೇ ಅವೈಜ್ಞಾನಿಕ. ಯಾರ ಮನೆಗೆ ಹೋಗಿ ಜಾತಿ ಗಣತಿ ನಡೆಸಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಸಮ್ಮದು ಜಾತ್ಯತೀತ ರಾಷ್ಟ್ರ ಎಂದು ಬುರುಡೆ ಬಿಡುತ್ತಾರೆ. ಈಗ ಜಾತಿ ಗಣತಿ ಹೆಸರಿನಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚಾಗಿರುವ ವೀರಶೈವ ಲಿಂಗಾಯತ ಜನಾಂಗವನ್ನು ಉಪ ಪಂಗಡಗಳಾಗಿ ವಿಂಗಡಿಸಿ ಸಂಖ್ಯೆಯಲ್ಲಿ ಕಡಿಮಯಾಗುವಂತೆ ಜಾಣ್ಮೆ ತೋರಿಸಿದ್ದಾರೆ. ಈಗ ನಡೆಸಿರುವ ಜಾತಿ ಜನಗಣತಿ ಸರಿಯಿಲ್ಲ. ಹೊಸದಾಗಿ ವೈಜ್ಞಾನಿಕ ಜಾತಿ ಗಣತಿ ನಡೆಸಿದರೆ ನಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ನೀಡಿದ್ದಾರೆ ಎನ್ನಲಾದ ವರದಿಯಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳೆಲ್ಲ ಸೇರಿ 1,27,66,378 ಜನಸಂಖ್ಯೆಯಿದೆ. ಆದರೆ ಕಾಂತರಾಜು ಅವರು ನೀಡಿದ ವರದಿಯಲ್ಲಿ ಕೇವಲ 75,43,613 ಜನಸಂಖ್ಯೆಯಿದೆ. ಹಾಗಾದರೆ ಉಳಿದ ವೀರಶೈವ ಲಿಂಗಾಯತರು ಎಲ್ಲಿ ಹೋದರು ಎಂದು ಪ್ರಶ್ನಿಸಿದ್ದಾರೆ.
ಸಮುದಾಯಕ್ಕೆ ವಿರುದ್ಧವಾದ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುವುದಾದರೆ ಆಡಳಿತಪಕ್ಷ, ವಿರೋಧ ಪಕ್ಷಗಳಲ್ಲಿರುವ ವೀರಶೈವ ಲಿಂಗಾಯತ ಮಂತ್ರಿಗಳು, ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬನ್ನಿ ಎಂದು ಆಗ್ರಹಿಸಿದ್ದಾರೆ.
ಜಾತಿ ಜನಗಣತಿ ಬಗ್ಗೆ ಬಹುತೇಕ ಎಲ್ಲಾ ಜನಾಂಗಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ತಮ್ಮ ನಿರ್ಧಾರ ಕೈ ಬಿಟ್ಟು ಹೊಸದಾಗಿ ಸಮೀಕ್ಷೆ ನಡೆಸಿ ಇಲ್ಲವಾದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.