ಮೂಡಿಗೆರೆ: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡದ ಒಳ ಮೀಸಲಾತಿಗಾಗಿ ನಡೆಯುತ್ತಿರುವ ಜಾತಿಗಣತಿಯಲ್ಲಿ ಎಡಗೈ, ಬಲಗೈ, ಛಲವಾದಿ, ದಲಿತ, ಪರಿಶಿಷ್ಟ, ಕರಾದಿ, ಮುಂಡಾಲರು, ಆದಿಕರ್ನಾಟಕ ಆದಿದ್ರಾವಿಡ ಎಂದು ವಿವಿಧ ರೀತಿಯಲ್ಲಿ ನೀಡದೆ ಹೊಲಯ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಆದಿಕರ್ನಾಟಕ ಸಮುದಾಯವನ್ನು ಮಾದಿಗ ವರ್ಗಕ್ಕೆ ಸೇರಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆದಿ ಕರ್ನಾಟಕ ಸಮುದಾಯವನ್ನು ಹೊಲಯ ವರ್ಗಕ್ಕೆ ಸೇರಿಸಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಈ ಬಾರಿಯ ಗಣತಿಯಲ್ಲಿ ಅಂತಹ ಗೊಂದಲವನ್ನು ನಿವಾರಿಸಬೇಕಾಗಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಂಬಳೆ ಹೋಬಳಿಯ ಅಂಬಳೆ, ತಿಮ್ಮನಹಳ್ಳಿ, ಹೊಸಕೋಟೆ ಈ 3 ಗ್ರಾಮಗಳಲ್ಲಿ ಮಾತ್ರ ಮಾದಿಗ ವರ್ಗದವರು ವಾಸವಾಗಿದ್ದಾರೆ. ಉಳಿದಂತೆ ಇಡೀ ಕ್ಷೇತ್ರದಲ್ಲಿ ಹೊಲಯ ವರ್ಗದವರು ವಾಸವಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೊಲಯ ಎಂದರೆ ಹೊಲದೊಡೆಯ ಎಂದು ಅರ್ಥ ಬರುತ್ತದೆ. ಇದರಲ್ಲಿ ಯಾವುದೆ ಅಳುಕು ಬೇಡ. ಇಲ್ಲಿನ ಮೂಲ ನಿವಾಸಿಗಳಾಗಿರುವ ಹೊಲಯಚ ವರ್ಗಕ್ಕೆ ಸೇರಿದವರು ಹೊಲಯ ಎಂದು ನಮೂದಿಸಬೇಕು. ಅಂಬಳೆ ಹೋಬಳಿ ಸೇರಿದಂತೆ ಇತರ ಕಡೆ ಮಾದಿಗ ವರ್ಗದವರು ವಾಸವಿದ್ದರೆ ಅವರು ತಮ್ಮ ವರ್ಗವನ್ನು ಮಾದಿಗ ಎಂದು ನಮೂದಿಸಬೇಕು. ಹಾಗಾದರೆ ಮಾತ್ರ ನಮಗೆ ಮೀಸಲಾತಿಯಂತೆ ಸರ್ಕಾರದ ಮಟ್ಟದಲ್ಲಿ ಸಾಮಾಜಿಕ ನ್ಯಾಯ ದೊರಕುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಯು.ಬಿ.ಮಂಜಯ್ಯ, ಹೆಸಗಲ್ ಗಿರೀಶ್, ಶಿವಾನಂದ, ಮಂಜುನಾಥ, ಗಣೇಶ್, ಸಂದೀಪ್ ಹೊರಟ್ಟಿ ಇದ್ದರು.