ಎನ್.ಆರ್.ಪುರ: ಪ್ರತಿಯೊಬ್ಬರಲ್ಲೂ ದಿವ್ಯತೆಯ ಶಕ್ತಿಯಿದ್ದು ಯಾರು ಸಹ ತಮ್ಮನ್ನು ಕೀಳು ಎಂದು ಭಾವಿಸಬಾರದು ಎಂದು ಶಿವಮೊಗ್ಗ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಸಕ್ರೀನಾಯ್ಕ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೋವರ್ಸ್ ರೇಂಜರ್ಸ್ , ಯುವ ರೆಡ್‌ಕ್ರಾಸ್ ಹಾಗೂ ವಿವಿಧ ವೇದಿಕೆಗಳ ಸಮಾರೋಪದಲ್ಲಿ ಮಾತನಾಡಿ, ಎಲ್ಲರಲ್ಲೂ ಅನಂತ ಜ್ಞಾನವಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿದ್ಯೆ ವಿನಯತೆ ತಂದುಕೊಡುತ್ತದೆ. ವಿದ್ಯೆ ಎಲ್ಲಕ್ಕಿಂತೂ ಶ್ರೇಷ್ಠವಾದುದು. ಪ್ರತಿಯೊಬ್ಬರು ತಂದೆ, ತಾಯಿಗೆ ಗೌರವ ನೀಡಬೇಕು. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ ದೇಶದಲ್ಲಿ ಸಾಮಾಜಿಕ ಸಮಾನತೆಯತ್ತ ನಾವು ಸಾಗಬೇಕಾಗಿದೆ. ಸುಭದ್ರ, ಸಮೃದ್ಧಿಯ ನಾಡಾಗಬೇಕಾದರೆ ಜಾತಿ, ಧರ್ಮ, ಲಿಂಗ ತಾರತಮ್ಯವನ್ನು ತೊಡೆದು ಹಾಕಿ ಕುವೆಂಪು ಅವರು ಹಾಕಿಕೊಟ್ಟ ಮನುಜಮತ, ವಿಶ್ವಪಥದತ್ತ ಸಾಗಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ಈ ಕಾಲೇಜಿನ ಸಾಕಷ್ಟು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ರ‌್ಯಾಂಕ್ ಪಡೆದಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು ಎಂದರು. ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ಪದವಿ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಉತ್ತಮ ಪ್ರಜೆಗಳಾಗಿ ತಂದೆ, ತಾಯಿ, ಗುರು, ಹಿರಿಯರಿಗೆ ಗೌರವ ನೀಡಬೇಕು. ಕಾಲೇಜಿಗೆ ತಮ್ಮದೆ ಆದ ಕೊಡುಗೆ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಪ್ರತಿಯೊಬ್ಬರು ತಾವು ಓದಿದ ಕಾಲೇಜಿಗೆ ಅಳಿಲು ಸೇವೆ ಮಾಡಬೇಕು. ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ ಶಿಕ್ಷಣವನ್ನು ಪಡೆಯದೆ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಬೇಕು ಎಂದರು.
ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ. ಜೆ.ಮಂಜುನಾಥ್, ಯುವ ರೆಡ್‌ಕ್ರಾಸ್ ಸಂಚಾಲಕ ಬಿ.ಅಶೋಕ್‌ಕುಮಾರ, ಕ್ರೀಡಾ ಸಂಚಾಲಕ ಎಂ.ಎಚ್.ವಿಶ್ವನಾಥ್, ವಿದ್ಯಾರ್ಥಿನಿ ಸಂಧ್ಯಾ ಇದ್ದರು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.