ನ್ಯೂಸ್

ಜಾತಿ ಗಣತಿಯಿಂದ ಜಾತಿ ಧರ್ಮ ಸಮುದಾಯಗಳನ್ನು ವಿಭಜಿಸಿ ರಾಜಕೀಯ ತಂತ್ರಗಾರಿಕೆ ಕಾಂಗ್ರೇಸ್ ಸರ್ಕಾರ ಮಾಡುತ್ತಿದೆ / ಸರ್ಕಾರಕ್ಕೆ ಗ್ಯಾರಂಟಿ ಇಲ್ಲದಂತೆ ಆಗಿದೆ / ಎಸ್.ಮುನಿಸ್ವಾಮಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಪರಿಶಿಷ್ಟರ ಹಣ ನುಂಗಿದ್ದಲ್ಲದೇ ಇದೀಗ ಹಾಲಿನ ಬೆಲೆ ಏರಿಸಿದರೂ ರೈತರಿಗೆ ನೀಡಬೇಕಾದ ಪ್ರೋತ್ಸಾಹ ಧನ ನೀಡದೇ ವಂಚಿಸಿರುವ ಈ ಲಜ್ಜೆಗೇಡಿ ಸರ್ಕಾರದ ಗ್ಯಾರೆಂಟಿಗಳಿಗೂ ವಾರೆಂಟಿ ಇಲ್ಲ. ಜಾತಿ, ಧರ್ಮ, ಸಮುದಾಯಗಳನ್ನು ವಿಭಜಿಸಿ ರಾಜಕೀಯ ಮಾಡುವ ತಂತ್ರವಾಗಿ ಇವರು ನಡೆಸಿರುವ ಅವೈಜ್ಞಾನಿಕ ಜಾತಿ ಗಣತಿಯಿಂದ ಈ ಸರ್ಕಾರಕ್ಕೂ ಗ್ಯಾರೆಂಟಿ ಇಲ್ಲವಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಲೇವಡಿ ಮಾಡಿದರು.

ನಗರದಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಬುಧವಾರ ನಗರದೇವತೆ ಕೋಲಾರಮ್ಮ ಹಾಗೂ ಸಾಯಿಬಾಬಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೇಸ್‌ನವರು ನೀಡಿರುವ ಗ್ಯಾರೆಂಟಿಗಳಿಗೂ ವಾರೆಂಟಿ ಇಲ್ಲ. ಜಾತಿ ಗಣತಿಯಿಂದ ಸರ್ಕಾರ ಪತನದತ್ತ ಸಾಗಿದೆ ಎಂದು ಈಗಾಗಲೇ ಜನ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.

ಕಾAಗ್ರೆಸ್ ಸರ್ಕಾರದ ಹಲವಾರು ಸಚಿವರೇ ಈ ಅವೈಜ್ಞಾನಿಕ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಲಿನ ದರ, ಪ್ರಯಾಣದರ, ಮುದ್ರಾಂಕ ಶುಲ್ಕ ಏರಿಕೆ ಹೀಗೆ ಜನರ ರಕ್ತ ಹೀರುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಅದರ ಕಾರ್ಯಕರ್ತರು ತಮ್ಮ ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಅಡುಗೆ ಅನಿಲ್ ಸಿಲೆಂಡರ್ ದರ ಏರಿಕೆ ಮಾಡಲಾಗಿದೆ ಎಂದು ಬೊಬ್ಬೆ ಇಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.

ಜಾತಿ ಗಣತಿ ಹೆಸರಿನಲ್ಲಿ ಧರ್ಮ, ಜಾತಿಗಳನ್ನು ವಿಭಜನೆ ಮಾಡುತ್ತಿದ್ದಾರೆ. ಹಿಂದೂಗಳಲ್ಲಿ ಜಾತಿ, ಒಳಜಾತಿಯ ಗಣತಿ ಲೆಕ್ಕಾಚಾರ ಮಾಡಲಾಗಿದ್ದು, ಬೇರೆ ಧರ್ಮದಲ್ಲಿನ ಜಾತಿಗಳನ್ನು ಏಕೆ ಗಣತಿಗೆ ಒಳಪಡಿಸಿಲ್ಲ ಎಂದು ಪ್ರಶ್ನಿಸಿ, ಮುಸ್ಲಿಮರ ತುಷ್ಟೀಕರಣಕ್ಕಾಗಿ ಧರ್ಮಾಧಾರಿತ ಮೀಸಲಾಗಿ ನೀಡುವ ಮೂಲಕ ಸಂವಿಧಾನಕ್ಕೆ ದ್ರೋಹವೆಸಗುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾನೂನು ಸುವ್ಯವಸ್ಥೆ ವೈಫಲ್ಯ ಅಧೋಗತಿ :

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದೆ. ಕೊಲೆ, ಹಲ್ಲೆ ಮಾಡಿದವರು ರಾಜಾರೋಷವಾಗಿ ಓಡಾಡುತ್ತಿದ್ದರೂ ಅವರನ್ನು ಬಂಧಿಸುವ ಪ್ರಯತ್ನವೂ ಪೊಲೀಸರು ಮಾಡುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆಕ್ರೋಷಗೊಂಡಿರುವ ಜನರನ್ನು ದಿಕ್ಕು ತಪ್ಪಿಸಲು ಜಾತಿ ಗಣತಿ ಪ್ರಸ್ತಾಪ ಮಾಡಲಾಗಿದೆ ಎಂದು ಟೀಕಿಸಿ, ಈ ಸರ್ಕಾರ ಯಾವ ಕ್ಷಣದಲ್ಲಾದರೂ ಪತನವಾಗಬಹುದು ಎಂದು ತಿಳಿಸಿದರು.

ವಕ್ಪ್ ಮಸೂದೆಗಳಿಗೆ ತಿದ್ದು ಪಡಿ ತಂದಿರುವುದನ್ನು ಮುಸ್ಲಿಂ ಸಮುದಾಯಗಳು ಸ್ವಾಗತಿಸಿ ಹರ್ಷ ವ್ಯಕ್ತ ಪಡೆಸುತ್ತಿದ್ದರೆ. ಕಾಂಗ್ರೇಸ್ ಪಕ್ಷವು ವಕ್ಫ್ ತಿದ್ದುಪಡಿ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿರುವುದು ಖಂಡನೀಯ ಎಂದರು.

ನಗರಸಭಾ ಸದಸ್ಯ ಪ್ರವೀಣ್ ಗೌಡ, ಮುಖಂಡರಾದ ಅಪ್ಪಿ ನಾರಾಯಣಸ್ವಾಮಿ, ಕಾಡುಗುರು ನಾಗಭೂಷಣ್, ಸಾಮಾ ಅನಿಲ್‌ಬಾಬು, ಯುವ ಮೋರ್ಚಾ ಬಾಲಾಜಿ, ಮಂಜುನಾಥ್, ಮಹೇಶ್, ಸಿಂಡಿಕೇಟ್ ಸದಸ್ಯ ರವೀಶ್‌ಗೌಡ, ರಾಜು ಅಪ್ಪಿ, ರೋಣೂರು ಚಂದ್ರಶೇಖರ್, ಸತೀಶ್, ಕಳ್ಳೀಪುರ ಜಗದೀಶ್, ಬಸಾಪುರ ಶಿವಕುಮಾರ್, ಸಂದೀಪ್, ಪ್ರಭುಗೌಡ, ವರುಣ್, ಪೊಲೀಸ್ ನಾರಾಯಣಸ್ವಾಮಿ, ಮುದ್ದಪ್ಪ ಮಂಜುನಾಥ್ ಪಲ್ಲವಿ ಮಣಿ ಮತ್ತಿತರರಿದ್ದರು.

ಚಿತ್ರ ೧೬ ಕೆ.ಎಲ್.ಆರ್. ೦೩ : ಕೋಲಾರದ ಸಾಯಿಬಾಬಾ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರು ನೀಡಿದ ಸನ್ಮಾನ ಸ್ವೀಕರಿಸಿದ ನಂತರ ಮಾಜಿ ಸಂಸದ ಎಸ್.ಮುನಿಸ್ವಾಮಿ ಮಧ್ಯಮದವರೊಂದಿಗೆ ಮಾತನಾಡಿದರು.