ವಿಜಯವಾಣಿ ಸುದ್ದಿಜಾಲ ಕೋಲಾರ
ಕೆ.ಸಿ.ವ್ಯಾಲಿ ನೀರು ಹರಿಯುವ ಕಾಲುವೆಯ ಕಾಮಗಾರಿ ಅವೈಜ್ಞಾನಿಕವಾಗಿದ್ದು ನೀರು ಉಕ್ಕಿ ಹರಿದು ಬೆಳೆಗಳು ನಾಶವಾಗಿದ್ದು ಕೂಡಲೇ ಕಾಲುವೆ ನವೀಕರಣಗೊಳಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಒತ್ತಾಯಿಸಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡುವನಹಳ್ಳಿ ಗ್ರಾಮದಲ್ಲಿ ಜಲಾವೃತವಾಗಿರುವ ಜಮೀನುಗಳನ್ನು ಭಾನುವಾರ ವೀಕ್ಷಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್.ಅಗ್ರಹಾರ, ಮುದುವಾಡಿ ಕೆರೆಯಿಂದ ಮಣಿಘಟ್ಟವರೆಗೆ ಕೆ.ಸಿ.ವ್ಯಾಲಿ ನೀರು ಹರಿಯುವ ಕಾಲುವೆಯನ್ನು ನವೀಕರಣ ಮಾಡಬೇಕು. ಕಾಲುವೆಗೆ ೮ ಅಡಿ ಎತ್ತರದ ತಡೆಗೋಡೆ ಹಾಗೂ ನೀರು ಸರಾಗವಾಗಿ ಹರಿಯಲು ೩೦ ಅಡಿ ಅಗಲ ಮಾಡಬೇಕು ಎಂದರು.
ಸಣ್ಣ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದೆನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಶೀಘ್ರದಲ್ಲಿಯೇ ರೈತರಿಗೆ ಆಗಿರುವ ಹಾನಿಯನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಶ್ರೀನಿವಾಸಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡಿದೆ. ಕಾಂಗ್ರೆಸ್ ಶಾಸಕರಿಗೆ ೫೦ ಕೋಟಿ ಅನುದಾನಕ್ಕೆ ೨೫ ಕೊಡುವಿದಾಗಿ ಹೇಳಿದ್ದಾರೆ. ಅದರಿಂದ ನ್ಯಾಯಾಲಯ ಮೊರೆ ಹೋಗಿದ್ದೇವೆ. ಕ್ಷೇತ್ರಕ್ಕೆ ೧೦೦ ಕೋಟಿ ಅನುದಾನ ಕೂಡಬೇಕು. ಇಲ್ಲಿಯ ತನಕ ಒಂದೂ ಮನೆಯನ್ನೂ ಕೊಟ್ಟಿಲ್ಲ. ಅನುದಾನ ಬಿಡುಗಡೆ ಆದರೆ ಪ್ರತಿ ಗ್ರಾಮಕ್ಕೆ ಸೌಕರ್ಯ ಕಲ್ಪಿಸಲಾಗುವುದು. ನಾನು ಯಾವತ್ತೂ ನಾಯಕ ಅಲ್ಲ. ನಿಮ್ಮ ಸೇವಕ ಎಂದರು.
ಸAಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೆ.ಸಿ.ವ್ಯಾಲಿ ನೀರಿನಿಂದ ಹಾನಿಗೆ ಒಳಗಾಗಿರುವ ಜಮೀನು ಪರಿಶೀಲನೆ ಮಾಡಿದ್ದೇವೆ. ಕೆ.ಸಿ ವ್ಯಾಲಿ ನೀರು ಹರಿಯಲು ಕಾಲುವೆ ಸರಿಪಡಿಸಬೇಕಿದೆ. ಕಾಲುವೆ ಹದಗೆಟ್ಟಿರುವುದರ ಜೊತೆಗೆ ಮಳೆ ಬಂದು ಉಕ್ಕಿ ಜಮೀನಿಗೆ ಹರಿದಿದೆ. ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆ ಕಾಮಗಾರಿಯಲ್ಲಿ ಎಡವಟ್ಟಾಗಿದೆ ಎಂದರು.
ನ. ೧೩ ಕ್ಕೆ ದಿಶಾ ಸಭೆ ಇದೆ. ಅಷ್ಟರೊಳಗೆ ಅಧಿಕಾರಿಗಳು ಪರಿಶೀಲನೆ ಮಾಡಿ ವರದಿ ಕೊಡಬೇಕು. ವೆಂಕಟಶಿವಾರೆಡ್ಡಿ ಈ ವಿಚಾರದಲ್ಲಿ ಗಭೀರವಾಗಿ ಕೆಲಸ ಮಾಡುತ್ತಿದ್ದಾರೆ ಈ ಭಾಗದಲ್ಲಿ ಹದೆಗೆಟ್ಟಿರುವ ರಸ್ತೆಗಳನ್ನು ಮೂರು ತಿಂಗಳಲ್ಲಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಕೆ.ಸಿ.ವ್ಯಾಲಿಯಿಂದ ರೈತರ ಜಮೀನಿಗೆ ಆಗಿರುವ ಹಾನಿಯನ್ನು ನೇರವಾಗಿ ಪರಿಶೀಲನೆ ನಡೆಸಲಾಗಿದೆ. ನೀರು ಹರಿಸುವ ಮುನ್ನ ಸಾಧಕ ಬಾಧಕ ಬಗ್ಗೆ ಗಮನ ಹರಿಸಬೇಕಿತ್ತು. ಸರಿಯಾದ ಕಾಲುವೆ ಇಲ್ಲದೆ ಹರಿಸಿ ರೈತರಿಗೆ ಸಮಸ್ಯೆ ತಂದೊಡ್ಡಿದ್ದಾರೆ. ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ನಷ್ಟಕ್ಕೆ ಕಾರಣವಾಗಿದೆ ಎಂದರು.
ಕೆ.ಸಿ ವ್ಯಾಲಿಗೆ ವಿರೋಧ ಇಲ್ಲ. ಆದರೆ, ಮೂರನೇ ಹಂತದ ಶುದ್ಧೀಕರಣ ಮಾಡಿ ಹರಿಸಬೇಕಿತ್ತು. ಶುದ್ಧೀಕರಣ ಮಾಡದೆ ಹರಿಸಿ ಸಮಸ್ಯೆ ಉಂಟಾಗಿದೆ. ಕಲುಷಿತ ನೀರು ಸೇವಿಸಿ ಜನ, ಜಾನುವಾರು, ಪಕ್ಷಿ, ಕೀಟಗಳಿಗೆ ಸಮಸ್ಯೆ ಉಂಟಾಗುತ್ತಿದೆ. ರೋಗಗಳು ಬರುತ್ತಿವೆ. ಬೆಳೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಮೂರನೇ ಹಂತದ ಶುದ್ಧೀಕರಣ ಮಾಡಬೇಕು. ಕಾಲುವೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಮಳೆ ಬಂದಿದ್ದರಿAದ ಬಹುತೇಕ ಕೆರೆಗಳು ಉಕ್ಕಿ ಹರಿಯುತ್ತಿವೆ. ಯರಗೋಳ್ ಜಲಾಶಯಕ್ಕೆ ಕೆ.ಸಿ ವ್ಯಾಲಿ ನೀರು ಹರಿಯುತ್ತಿದೆ. ಆ ನೀರನ್ನು ಜನರು ಕುಡಿಯುತ್ತಿದ್ದು ಏನಾದರೂ ಸಮಸ್ಯೆ ಉಂಟಾದರೆ ಯಾರು ಗತಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದರು.
ಶಾಸಕರು ನ್ಯಾಯಾಲಯಕ್ಕೆ ಹೋಗಿ ಅನುದಾನ ಪಡೆಯುವಂಥ ಪರಿಸ್ಥಿತಿಯನ್ನು ಈ ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಶೇಷಾಪುರ ಗೋಪಾಲ್, ಶ್ರೀನಿವಾಸ್, ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ನಗರಸಭೆ ಸದಸ್ಯ ರಾಕೇಶ್, ಮುಖಂಡರಾದ ದಿಂಬ ನಾಗರಾಜಗೌಡ, ವಿಶ್ವನಾಥ್ ಗೌಡ, ರಾಮಚಂದ್ರೇಗೌಡ, ಕುಮಾರ್, ಶ್ರೀನಿವಾಸ್, ತಾ.ಪಂ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ವೆಂಕಟೇಶ್ ಗೌಡ, ಕೇಶವ, ವೆಂಕಟೇಶ್, ರಘುನಾಥ್, ಮನೋಹರ್, ಸೋಮಣ್ಣ, ಸಂತೋಷ್ ಇದ್ದರು.
ಚಿತ್ರ ೦೯ ಕೆ.ಎಲ್.ಆರ್. ೦೧ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡುವನಹಳ್ಳಿ ಗ್ರಾಮದಲ್ಲಿ ಜಲಾವೃತವಾಗಿರುವ ಜಮೀನುಗಳನ್ನು ಭಾನುವಾರ ವೀಕ್ಷಿಸಿದ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಸಂಸದ ಎಂ.ಮಲ್ಲೇಶ್ ಬಾಬು ಮುಂತಾದವರಿದ್ದರು.