|ರಾಘವ ಶರ್ಮ ನಿಡ್ಲೆ ನವದೆಹಲಿ
ಕೃಷ್ಣಾ ನ್ಯಾಯಾಧಿಕರಣದ ಐತೀರ್ಪ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆಯಿಂದ ಜನವರಿ 10ರಂದು ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾ.ಎ.ಎಸ್. ಬೋಪಣ್ಣ ಹಿಂದೆ ಸರಿದ ನಿರ್ಧಾರ ಕಾನೂನು ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ನ್ಯಾ. ಚಂದ್ರಚೂಡ್ ಮೂರು ವರ್ಷಗಳಿಂದ ಈ ಅರ್ಜಿ ವಿಚಾರಣೆ ನಡೆಸಿದ್ದಾರೆ. ಹೀಗಿದ್ದಾಗ, ನ್ಯಾಯಮೂರ್ತಿಯವರ ನಡೆ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಭಾರೀ ವಿವಾದದ ಅಥವಾ ಜಡ್ಜ್ಗಳು ಹಿಂದೆ ವಕೀಲರಾಗಿದ್ದಾಗ ಕಕ್ಷಿದಾರರಾಗಿದ್ದವರ ಅಥವಾ ಮಾತೃರಾಜ್ಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣಗಳಿದ್ದಾಗ... ಹೀಗೆ ಅಸಾಮಾನ್ಯ ಸನ್ನಿವೇಶಗಳಲ್ಲಿ ವಿಚಾರಣೆಯಿಂದ ಹಿಂದೆ ಸರಿಯುವುದುಂಟು. ಕೃಷ್ಣಾ ಪ್ರಕರಣದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ವಕೀಲರು ನ್ಯಾ. ಚಂದ್ರಚೂಡ್ ಅಥವಾ ನ್ಯಾ.ಎ.ಎಸ್. ಬೋಪಣ್ಣ ಹಿಂದೆ ಸರಿಯಬೇಕೆಂದು ಕೇಳಿಕೊಂಡಿರಲಿಲ್ಲ. ಬದಲಿಗೆ, ‘ಬೇರೆ ರಾಜ್ಯಗಳಿಗೆ ಆಕ್ಷೇಪಣೆಯಿಲ್ಲ ಎಂದರೆ ನೀವೇ ವಿಚಾರಣೆ ಮುಂದುವರಿಸಿ’ ಎಂದು ರಾಜ್ಯದ ವಕೀಲ ಮೋಹನ್ ಕಾತರಕಿ ಕೂಡ ನ್ಯಾಯಮೂರ್ತಿಗಳಲ್ಲಿ ವಿನಂತಿಸಿಕೊಂಡಿದ್ದರು.
ಅಂತಾರಾಜ್ಯ ಜಲವ್ಯಾಜ್ಯ ಅತಿಸೂಕ್ಷ್ಮ ವಿಚಾರ. ಸಣ್ಣಮಟ್ಟಿನ ಹಿನ್ನಡೆಯನ್ನೂ ಜನರು ಸ್ವೀಕರಿಸುವುದಿಲ್ಲ. ನೀರು ಭಾವನಾತ್ಮಕ ವಿಷಯವಾದ್ದರಿಂದ ಜನಪ್ರತಿನಿಧಿಗಳಂತೂ ಇಲ್ಲಿ ರಾಜಕೀಯ ಲಾಭಕ್ಕಾಗಿಯೇ ಹಾತೊರೆಯುತ್ತಿರುತ್ತಾರೆ. ಕೃಷ್ಣಾ ನ್ಯಾಯಾಧಿಕರಣ ಐತೀರ್ಪಿನ ಅಧಿಸೂಚನೆ ಹೊರಡಿಸಬೇಕು ಎಂದು ಕರ್ನಾಟಕ, ಮಹಾರಾಷ್ಟ್ರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರಿಂದ ನ್ಯಾ.ಡಿ.ವೈ. ಚಂದ್ರಚೂಡ್ (ಮಹಾರಾಷ್ಟ್ರ ಮೂಲ) ಮತ್ತು ನ್ಯಾ.ಎ.ಎಸ್. ಬೋಪಣ್ಣ (ಕರ್ನಾಟಕ ಮೂಲ) ಕೇಂದ್ರ ಸರ್ಕಾರಕ್ಕೆ ಅಫಿಡವಿಟ್ ಮುಖೇನ ಉತ್ತರ ನೀಡುವಂತೆ ತಿಳಿಸಿದ್ದರು. ಜ.10ರಂದು ಕೇಂದ್ರ ತನ್ನ ನಿರ್ಧಾರ ತಿಳಿಸಬೇಕಿತ್ತು. ಆದರೆ, ಈ ವಿಚಾರಣೆಗೆ ಕೆಲವು ದಿನಗಳ ಮುನ್ನ ನ್ಯಾಯಮೂರ್ತಿಗಳಿಗೆ ಹಲವಾರು ಆಕ್ಷೇಪಾರ್ಹ ರೀತಿಯ ಇ-ಮೇಲ್ಗಳು, ಪತ್ರಗಳು ಬಂದಿವೆ ಎಂದು ವರದಿಯಾಗಿದೆ. ‘ಪ್ರಕರಣ ನಿಮ್ಮ ರಾಜ್ಯದ ಜಲ ವಿವಾದದ ಕುರಿತಾಗಿದ್ದರೂ ಹೇಗೆ ವಿಚಾರಣೆ ನಡೆಸುತ್ತೀರಿ?’ ಎಂದೆಲ್ಲ ದಾಖಲಿಸಿ ವಿಚಾರಣೆ ನಡೆಸುವುದನ್ನೇ ಪ್ರಶ್ನಿಸಿದ್ದಾರೆ. ಇದರಿಂದ ಬೇಸರಗೊಂಡ ನ್ಯಾಯಮೂರ್ತಿಯೊಬ್ಬರು ಪತ್ರಿಕೆಯೊಂದಕ್ಕೆ ಮಾತನಾಡಿದ್ದ ವೇಳೆ ವಿಚಾರಣೆಯಿಂದ ಹಿಂದೆ ಸರಿದಿದ್ದರ ಕಾರಣ ವಿವರಿಸಿದ್ದಾರೆ.
ಈ ಹಿಂದೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾ. ಮೋಹನ್ ಶಾಂತನಗೌಡರ್ ಕೃಷ್ಣಾ ಜಲವಿವಾದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಹಲವು ನಿದರ್ಶನಗಳು: ನಿರ್ದಿಷ್ಟ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವುದು ಅಥವಾ ಹಿಂದೆ ಸರಿಯುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ಅವರಿಗೆ ಪ್ರಶ್ನಾತೀತ ಅಧಿಕಾರವಿದೆ. ಕೆಲವೊಮ್ಮೆ ವಕೀಲರು ಅಥವಾ ಬಾಹ್ಯ ಶಕ್ತಿಗಳು ಬೆದರಿಕೆ ಹಾಕಿದರೂ, ವಿಚಾರಣೆ ನಡೆಸುತ್ತೇವೆ ಎಂಬ ದಿಟ್ಟ ನಿರ್ಧಾರ ಕೈಗೊಂಡ ಅನೇಕ ಜಡ್ಜ್ಗಳಿದ್ದಾರೆ. 1993ರ ಮುಂಬೈ ಸರಣಿ ಬಾಂಬ್ ಕೇಸ್ನಲ್ಲಿ ಆರೋಪಿ ಯಾಕೂಬ್ ಮೆಮನ್ಗೆ ಗಲ್ಲು ಶಿಕ್ಷೆ ಘೋಷಿಸಿದ್ದ ನಿವೃತ್ತ ಸಿಜೆಐ ದೀಪಕ್ ಮಿಶ್ರಾಗೆ ಹತ್ಯೆ ಬೆದರಿಕೆ ಬಂದಿತ್ತು. ಹಾಗಿದ್ದರೂ, ನಂತರದಲ್ಲಿ ಅರ್ಜಿ ವಿಚಾರಣೆ ನಡೆಸಲು ಹಿಂದೇಟು ಹಾಕಿರಲಿಲ್ಲ. ಸುಪ್ರೀಂಕೋಟ್ನ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಪ್ರಕಟಿಸಿದ್ದ ತೀರ್ಪೆಂದರ ಮರುಪರಿಶೀಲನೆಗಾಗಿ ರಚನೆಯಾಗಿದ್ದ ಸಾಂವಿಧಾನಿಕ ಪೀಠಕ್ಕೆ ಸ್ವತಃ ಅವರೇ ಮುಖ್ಯಸ್ಥರಾಗಿದ್ದರು. ಕಕ್ಷಿದಾರರ ಹಲವು ವಿನಂತಿಗಳ ಹೊರತಾಗಿಯೂ, ಸಾಂವಿಧಾನಿಕ ಪೀಠದಿಂದ ಹೊರಬರಲು ನ್ಯಾ. ಮಿಶ್ರಾ ಒಪ್ಪಿರಲಿಲ್ಲ. ‘ನಿಮ್ಮ ಬೇಡಿಕೆಗಳಿಗೆ ಸಮ್ಮತಿಸುವುದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ’ ಎಂದವರು ತಿರುಗೇಟು ನೀಡಿದ್ದರು. ಎಲ್ಲ ನ್ಯಾಯಮೂರ್ತಿಗಳು ಹೀಗಿರುತ್ತಾರೆಂದೇನಲ್ಲ. ವಿವಾದದಿಂದ ದೂರವಿರಬೇಕೆಂಬ ಉದ್ದೇಶ ಮತ್ತು ವಿನಾಕಾರಣ ಪಕ್ಷಪಾತದ ಆರೋಪಕ್ಕೆ ಗುರಿಯಾಗುವ ಬದಲು ವಿಚಾರಣೆಯಿಂದ ಹಿಂದೆ ಸರಿಯುವುದೇ ಲೇಸು ಎನ್ನುವವರಿದ್ದಾರೆ.
ಕೃಷ್ಣಾ ಐತೀರ್ಪಿನ ಮರು ವಿಚಾರಣೆಯಾಗಬೇಕು ಎಂದು ಹಿಂದೆ ತೆಲಂಗಾಣ ಸರ್ಕಾರ ಕೃಷ್ಣಾ ನ್ಯಾಯಾಧಿಕರಣದ ಮುಂದೆ ಅರ್ಜಿ ಸಲ್ಲಿಸಿದ್ದಾಗ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನೂ ಪಕ್ಷಗಾರರನ್ನಾಗಿ ಮಾಡಬೇಕೆಂದು ಕೋರಿತ್ತು. ಕರ್ನಾಟಕ ಇದನ್ನು ವಿರೋಧಿಸಿತು. ಈ ಅರ್ಜಿ ವಿಚಾರಣೆ ನಡೆಸಿದ ಪೀಠದಲ್ಲಿ ಕರ್ನಾಟಕ ಮೂಲದ ನ್ಯಾ. ರಾಮಮೋಹನ್ ರೆಡ್ಡಿ ಅವರೂ ಇದ್ದರು. ‘ನೀವು ಕರ್ನಾಟಕದವರಾಗಿರುವುದರಿಂದ ವಿಚಾರಣೆ ಮಾಡಬಾರದು’ ಎನ್ನುವುದು ಕರ್ನಾಟಕ ಸರ್ಕಾರದ ವಾದವಾಗಿತ್ತು. ‘ಇತರ ರಾಜ್ಯಗಳಿಗೆ ತಕರಾರಿಲ್ಲ ಎನ್ನುವುದಾದರೆ ನಿಮಗೇನು ಸಮಸ್ಯೆ’ ಎನ್ನುವುದು ನ್ಯಾಯಾಧಿಕರಣದ ಪ್ರಶ್ನೆಯಾಗಿತ್ತು. ಮುಂದೊಂದು ದಿನ ಆಂಧ್ರ ಅಥವಾ ತೆಲಂಗಾಣದ ಜನರು ಇದನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿದರೆ ವಿನಾಕಾರಣ ವಿವಾದ ಸೃಷ್ಟಿಯಾಗುತ್ತದೆ ಎಂದು ಸರ್ಕಾರ ತನ್ನ ವಾದ ಸಮರ್ಥಿಸಿಕೊಂಡಿತು. ಅಂತಿಮವಾಗಿ, ಸರ್ಕಾರದ ಈ ಪ್ರತಿಪಾದನೆಗೆ ನ್ಯಾಯಾಧಿಕರಣ ಸಮ್ಮತಿಸಲಿಲ್ಲ.
‘ರಾಜ್ಯ ಸರ್ಕಾರದ ವಕೀಲರು ನ್ಯಾಯಮೂರ್ತಿಗಳ ಬಗ್ಗೆ ವಿರೋಧ ವ್ಯಕ್ತಪಡಿಸದಿದ್ದರೂ, ಜನರು, ಬಾಹ್ಯಶಕ್ತಿಗಳನ್ನು ತಡೆಯುವುದು ಹೇಗೆ? ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಂತೂ ಬಯ್ಗುಳಗಳಿಗೆ ಲಗಾಮು ಸಾಧ್ಯವೇ? ಮುಲ್ಲಪೆರಿಯಾರ್ ಅಣೆಕಟ್ಟು ವಿವಾದದ ಬಗ್ಗೆ ಕೇರಳದ ನ್ಯಾಯಮೂರ್ತಿ ಬಾಲಸುಬ್ರಹ್ಮಣ್ಯಂ ವಿಚಾರಣೆ ನಡೆಸಿದ್ದಕ್ಕೆ ಈಗಲೂ ಜನರು, ರಾಜಕಾರಣಿಗಳಿಂದ ಆಕ್ಷೇಪಾರ್ಹ ಮಾತುಗಳನ್ನು ಕೇಳಬೇಕಾಗುತ್ತಿದೆ. ಯಾವುದೇ ಪ್ರಕರಣವಾಗಿರಲಿ, ಜಡ್ಜ್ಗಳು ವಿಚಾರಣೆ ನಡೆಸಲಾರೆ ಎಂದು ಹಿಂದೆ ಸರಿಯುವುದಾದರೆ ಅದಕ್ಕೆ ಸಮರ್ಪಕ ವಿವರಣೆ ನೀಡಬೇಕು’ ಎಂದು ಕಾತರಕಿ ಅಭಿಪ್ರಾಯಪಡುತ್ತಾರೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾನೂನನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದ 2015ರ ತೀರ್ಪಿನಲ್ಲಿ ನ್ಯಾ.ಕುರಿಯೆನ್ ಜೋಸೆಫ್ ಮತ್ತು ನ್ಯಾ.ಮದನ್ ಲೋಕುರ್, ‘ಪಾರದರ್ಶಕತೆಯ ಉದ್ದೇಶ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಸಕ್ಷಮತೆಗಾಗಿ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯುವ ಕುರಿತು ಅಗತ್ಯ ವಿವರಣೆ ನೀಡಬೇಕು’ ಎಂದಿರುವುದು ಉಲ್ಲೇಖಾರ್ಹ.
ಆಂಧ್ರ ನ್ಯಾಯಾಧೀಶ ಬೇಡ ಎಂದಿದ್ದ ಒಡಿಶಾ: ಕೆಲ ವರ್ಷಗಳ ಹಿಂದೆ ಒಡಿಶಾ-ಆಂಧ್ರಪ್ರದೇಶ ನಡುವಿನ ವಂಶಧಾರ ಜಲವ್ಯಾಜ್ಯ ನ್ಯಾಯಾಧಿಕರಣಕ್ಕೆ ಆಂಧ್ರಪ್ರದೇಶ ಮೂಲದ ನ್ಯಾ. ಗುಲಾಂ ಮಹಮ್ಮದ್ರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಇದಕ್ಕೆ ಅಸಮಾಧಾನ ಹೊರಹಾಕಿದ ಒಡಿಶಾ ಸರ್ಕಾರ, ನ್ಯಾಯಾಧಿಕರಣ ಮುಂದೆಯೇ ವಿರೋಧಿಸಿತ್ತು. ಆದರೆ, ನ್ಯಾಯಾಧಿಕರಣ ಇದನ್ನೊಪ್ಪಲಿಲ್ಲ. ಹೈಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ನ್ಯಾಯಾಂಗ ಸ್ವಾತಂತ್ರ್ಯದ ಕಾರಣ ನೀಡಿದ ಹೈಕೋರ್ಟ್, ಒಡಿಶಾ ಅರ್ಜಿ ವಜಾಗೊಳಿಸಿತು. ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಒಡಿಶಾ ಪರ ಫಾಲಿ ನಾರಿಮನ್ ವಾದ ಮಂಡಿಸಿದರು. ‘ನ್ಯಾಯಮೂರ್ತಿ ಪಕ್ಷಪಾತಿ ಎಂದು ನಾವು ಹೇಳುತ್ತಿಲ್ಲ. ಪಕ್ಷಪಾತದ ಗ್ರಹಿಕೆಗೆ ಅವಕಾಶ ಬೇಡ’ ಎಂದರು. ಸುಪ್ರೀಂಕೋರ್ಟ್ ಪ್ರತಿವಾದಿಗಳಿಗೆ ನೊಟೀಸ್ ಜಾರಿ ಮಾಡಿತು. ಈ ವೇಳೆ ಆಂಧ್ರ ವಿಭಜನೆಯಾಗಿ ತೆಲಂಗಾಣ ಹೊಸ ರಾಜ್ಯವಾಗಿತ್ತು. ನ್ಯಾ. ಗುಲಾಂ ಮಹಮ್ಮದ್ ಮೂಲತಃ ತೆಲಂಗಾಣ ಭಾಗದವರಾಗಿದ್ದರು. ಹೀಗಾಗಿ, ಆಂಧ್ರ ಸುಪ್ರೀಂಕೋರ್ಟ್ನಿಂದ ತನ್ನ ಅರ್ಜಿ ಹಿಂತೆಗೆದುಕೊಂಡಿತು.
ಕಾವೇರಿ ಜಲವ್ಯಾಜ್ಯಕ್ಕೆ ಸಂಬಂಧಿಸಿ 1990ರಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಸುಪ್ರೀಂಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯಬೇಕಿದ್ದ ಸಂದರ್ಭದಲ್ಲಿ ತಮಿಳುನಾಡು ಮೂಲದ ನ್ಯಾ. ರಂಗನಾಥನ್ ಪೀಠದ ಸದಸ್ಯರಾಗಿದ್ದರು. ಆದರೆ, ವಿಚಾರ ಸೂಕ್ಷ್ಮತೆ ಅರಿತ ರಾಜ್ಯದ ವಕೀಲರು ಈ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸುತ್ತಾರೆಯೇ ಎಂದು ರಿಜಿಸ್ಟ್ರಾರ್ ಬಳಿ ಕೇಳಿದ್ದರು. ತಕ್ಷಣವೇ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯಲು ತೀರ್ವನಿಸಿದರು. ಇಲ್ಲಿ ನ್ಯಾಯಮೂರ್ತಿಗಳು ಪಕ್ಷಪಾತಿಯಾಗಿ ವರ್ತಿಸುತ್ತಾರೆ ಎನ್ನುವುದು ವಾದವಲ್ಲ. ಆದರೆ, ಸಾರ್ವಜನಿಕ ವಲಯದಲ್ಲಿ ‘ಪಕ್ಷಪಾತದ ಗ್ರಹಿಕೆ’ ಮೂಡಲು ನಾವೇಕೆ ಅವಕಾಶ ನೀಡಬೇಕು ಎನ್ನುವುದು ಪ್ರಶ್ನೆ. 2019ರಲ್ಲಿ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ವಿಚಾರಣೆ ನಡೆಸಬೇಕಿದ್ದ ಸಾಂವಿಧಾನಿಕ ಪೀಠದಿಂದ ನ್ಯಾ.ಯು.ಯು. ಲಲಿತ್ ಅವರು ಹೊರಬಂದಿದ್ದರು. ಜನ್ಮಭೂಮಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವೊಂದರಲ್ಲಿ ಅವರು ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ವಕೀಲರು ತಕರಾರು ತೆಗೆದ ಹಿನ್ನೆಲೆಯಲ್ಲಿ ನ್ಯಾ. ಲಲಿತ್ ಹಿಂದೆ ಸರಿದಿದ್ದರು.
| ಮೋಹನ್ ಕಾತರಕಿ ಸುಪ್ರೀಂಕೋರ್ಟ್ ವಕೀಲ