ನ್ಯೂಸ್

ಜಲಜೀವನ್ ಮಿಷನ್ ಯೋಜನೆ ಪೂರ್ಣಗೊಳಿಸಿ: ಡಾ. ಎಸ್.ಸೆಲ್ವಕುಮಾರ್

ಶಿವಮೊಗ್ಗ: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಫಲಾನುಭವಿಗಳ ಆಯ್ಕೆ, ಟೆಂಡರ್ ಪ್ರಕ್ರಿಯೆಗಳನ್ನು ಎಲ್ಲ ಇಲಾಖೆಗಳು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಕಾಮಗಾರಿಗಳ ಅನುಷ್ಠಾನ ಆರಂಭಿಸಬೇಕು. ಅನುಷ್ಠಾನ ಕಾರ್ಯಕ್ಕಾಗಿ ಮಾರ್ಚ್‌ವರೆಗೆ ವಿಳಂಬಿಸಬಾರದು ಎಂದು ಸ್ಪಷ್ಟಪಡಿಸಿದರು.

ಜಲಜೀವನ್ ಮಿಷನ್ ಪ್ರಥಮ ಹಂತದಲ್ಲಿ 666 ಜನವಸತಿಗಳಿಗೆ ನೀರು ಪೂರೈಸಲು 626 ಕಾಮಗಾರಿಗಳಿಗೆ 148 ಕೋಟಿ ರೂ. ಮಂಜೂರಾಗಿದೆ. ಅದರಲ್ಲಿ 591 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿವೆ. ಯೋಜನೆಯ ಎರಡನೇ ಹಂತದಲ್ಲಿ 540 ಜನವಸತಿಗಳಿಗೆ ನೀರು ಒದಗಿಸಲು 136 ಕೋಟಿ ರೂ. ಮಂಜೂರಾಗಿದ್ದು, ಕಾರ್ಯಾದೇಶ ನೀಡಲಾಗಿರುವ 389 ಕಾಮಗಾರಿಗಳ ಪೈಕಿ 77 ಕಾಮಗಾರಿಗಳು ಪೂರ್ಣಗೊಂಡಿವೆ. 3 ಹಂತದಲ್ಲಿ 884 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, 77 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಡಿಸಿ ಡಾ. ಆರ್.ಸೆಲ್ವಮಣಿ, ಎಡಿಸಿ ನಾಗೇಂದ್ರ ಹೊನ್ನಾಳಿ ಇದ್ದರು.