ನ್ಯೂಸ್

ಜಲ ಜೀವನ್ ಮಿಷನ್ ಯೋಜನೆಯಿಂದ ಮನೆ ಮನೆಗೆ ನಲ್ಲಿ ಮೂಲಕ ನೀರು / ಕೊತ್ತೂರು ಮಂಜುನಾಥ್,

ವಿಜಯವಾಣಿ ಸುದ್ದಿಜಾಲ ಕೋಲಾರ

ಜಲ ಜೀವನ್ ಮಿಷನ್ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಪ್ರತಿ ಮನೆ ಮನೆಗೆ ನಲ್ಲಿ ಸಂಪರ್ಕದ ಮೂಲಕ ಶುದ್ದ ಕುಡಿಯುವ ನೀರು ನೀಡಲಿದ್ದು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ತಾಲೂಕಿನ ವಕ್ಕಲೇರಿ ಹಾಗೂ ಕಸಬಾ ಹೋಬಳಿಯ ಗ್ರಾಮಗಳಲ್ಲಿ ಬುಧವಾರ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಪ್ರತಿ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಯೋಜನೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಶೇ.೪೫ ರಾಜ್ಯ ಸರ್ಕಾರ ಶೇ.೪೫ ಅನುದಾನದೊಂದಿಗೆ ಸಾರ್ವಜನಿಕರ ಶೇ.೧೦ ಹಣವನ್ನು ಬಳಸುವಂತೆ ರೂಪಿಸಲಾಗಿತ್ತು. ನಂತರ ಸಾರ್ವಜನಿಕರ ಹಣವನ್ನು ರಾಜ್ಯದ ಸಿದ್ದರಾಮಯ್ಯ ಸರ್ಕಾರವೇ ಶೇ.೧೦ ರಷ್ಟು ಹಣವನ್ನು ನೀಡುವ ಮೂಲಕ ಜನರ ಅಭಿವೃದ್ಧಿಗೆ ಬದ್ದವಾಗಿ ಕೆಲಸ ಮಾಡಲಾಗುತ್ತಿದೆ ಎಂದರು.

ಮಹಾತ್ಮ ಗಾಂಧೀಜಿಯವರ ಕನಸಿನ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯೂ ಒಂದಾಗಿದೆ. ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯಿಂದ ಕಾಯಿಲೆಗಳಿಗೆ, ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು. ಸರ್ಕಾರ ಸಾಕಷ್ಟು ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಮಾಡಿದರು ಸಹ ಇನ್ನು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದನ್ನು ನೋಡಿತ್ತಿದ್ದೇವೆ. ಅದಕ್ಕಾಗಿ ಗ್ರಾಮೀಣ ಭಾಗದ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಮೂಲಕ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಪ್ರತಿ ಮನೆಗೆ ನೀರು ಒದಗಿಸಲಾಗುವುದು ಈ ಯೋಜನೆಯನ್ನು ಮುಂದಿನ ಪೀಳಿಗೆಯ ದೂರದೃಷ್ಟಿಯಿಂದ ಮಾಡಲಾಗಿದೆ. ತಾಲೂಕಿನ ಕಸಬಾ ಮತ್ತು ವಕ್ಕಲೇರಿ ಹೋಬಳಿಯ ಸುಮಾರು ೨೧ ಗ್ರಾಮಗಳಲ್ಲಿ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ವೇಗವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಮುಂದೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಜನ ಜೀವನ್ ಮಿಷನ್ ಯೋಜನೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿಕ್ಕಹಸಾಳ ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ ಚೌಡಪ್ಪ, ಬೆಗ್ಲಿಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಮಾಲಾ ಲೋಕೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕಾಂಗ್ರೆಸ್ ಮುಖಂಡರಾದ ಗದ್ದೆಕಣ್ಣೂರು ದಯಾನಂದ್, ಚಂಜಿಮಲೆ ರಮೇಶ್, ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಮೈಲಾಂಡಹಳ್ಳಿ ಮುರಳಿ, ಛತ್ರಕೋಡಿಹಳ್ಳಿ ಮಂಜುನಾಥ್, ಚೋಳಘಟ್ಟ ಸೀನಪ್ಪ, ಎಲ್.ಜಿ ಮುನಿರಾಜು, ನಾರಾಯಣಸ್ವಾಮಿ, ಜನಪನಹಳ್ಳಿ ನವೀನ್, ಮುಂತಾದವರು ಇದ್ದರು.

ಚಿತ್ರ ೨೫ ಕೆ.ಎಲ್.ಆರ್. ೦೨ : ಜಲಜೀವನ್ ಮಿಷನ್ ಯೋಜನೆಯಲ್ಲಿ ಚಿಕ್ಕಹಸಾಳ ಗ್ರಾಮದಲ್ಲಿ ಮನೆ ಮನೆಗೂ ನಲ್ಲಿ ಸಂಪರ್ಕಕ್ಕೆ ಗುದ್ದಲಿ ಪೂಜೆ ನೆರವೇರಿಸಿದೆ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಅನಿಲ್‌ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಆಂಜಿನಮ್ಮ ಇದ್ದರು.