ಜಯಪುರ: ಮೇಗುಂದ ಹೋಬಳಿಯ ಜನರ ಅನೇಕ ವರ್ಷಗಳ ಕನಸಾಗಿದ್ದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ ಈಡೇರಿದ್ದು, ಸುಸಜ್ಜಿತ ಆರೋಗ್ಯ ಕೇಂದ್ರ ನಿರ್ಮಾಣವಾಗಿದೆ.
ನೂತನ ಸಮುದಾಯ ಆರೋಗ್ಯ ಕೇಂದ್ರ 12.40 ಕೋಟಿ ರೂ. ವೆಚ್ಚದಲ್ಲಿ 2400 ಚದರ ಮೀಟರ್‌ಜಾಗದಲ್ಲಿ ನಿರ್ಮಾಣವಾಗಿದೆ. 76 ಕೊಠಡಿಗಳು, 22 ಶೌಚಗೃಹಗಳು, ಶವಾಗಾರ ವಾರ್ಡ್, ಒಪಿಡಿ, ಎಕ್ಸರೆ ಕೊಠಡಿಗಳಿವೆ.ಆಸ್ಪತ್ರೆಯಲ್ಲಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ, ಆಕ್ಸಿಜನ್ ಪೈಪ್‌ಲೈನ್, ವಿಶಾಲವಾದ 3 ವಾರ್ಡ್‌ಗಳಿದ್ದು, ಮೂವರು ವೈದ್ಯರು ಪಾಳಿಯಂತೆ 24 ಗಂಟೆ ಕಾರ್ಯ ನಿರ್ವಹಿಸಲಿದ್ದಾರೆ. ವಾರದಲ್ಲಿ 3 ದಿನ ಓರ್ವ ಮಹಿಳಾ ಪ್ರಸೂತಿ ತಜ್ಞರು ಕರ್ತವ್ಯ ನಿರ್ವಹಿಸಲಿದ್ದಾರೆ.
ಆಸ್ಪತ್ರೆಗೆ 30 ಬೆಡ್‌ಗಳು, ಓರ್ವ ಪ್ರಸೂತಿ ತಜ್ಞರು, ಓರ್ವ ಮಕ್ಕಳ ತಜ್ಞರು ಹಾಗೂ ಓರ್ವ ಅರವಳಿಕೆ ತಜ್ಞರ ಮಂಜೂರಾಗಿದ್ದು, ಓರ್ವ ದಂತ ವೈದ್ಯರ ನೇಮಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಗ್ರೂಪ್ ಡಿ, ಸ್ಟ್ಾ ನರ್ಸ್ ಸೇರಿದಂತೆ 9 ಸಿಬ್ಬಂದಿ ಹುದ್ದೆ ಮಂಜೂರಾಗಿದ್ದು, ನೇಮಕಾತಿ ನಡೆಯಬೇಕಿದೆ.
ಮೇಗುಂದ ಹೋಬಳಿಯಲ್ಲಿ 29,467 ಜನರಿದ್ದು, ಸುಮಾರು 40 ಕಿಮೀ ದೂರದ ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಗೆ ತಲುಪಿ ತುರ್ತು ಚಿಕಿತ್ಸೆ ಪಡೆಯುವುದು ಕಷ್ಟ ಸಾಧ್ಯವಾಗುತ್ತಿದ್ದು, ಹೊಸ ಆಸ್ಪತ್ರೆ ನಿರ್ಮಾಣ ಈ ಭಾಗದ ಜನರಿಗೆ ವರದಾನವಾಗಿದೆ.
ಅ.7ರಂದು ಸಂಜೆ 3ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್, ಶಾಸಕ ರಾಜೇಗೌಡ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.