ವಿಜಯವಾಣಿ ಸುದ್ದಿಜಾಲ ಕೋಲಾರ
ಜಯಕರ್ನಾಟಕ ವತಿಯಿಂದ ವರನಟ ಡಾ. ರಾಜಕುಮಾರ್ ರವರ ೯೬ ನೇ ಹುಟ್ಟುಹಬ್ಬ ಆಚರಣೆಯನ್ನು ನಗರದ ಹೊಸ ಬಸ್ ನಿಲ್ದಾಣ ಹತ್ತಿರದ ಪಲ್ಲವಿ ಚಿತ್ರ ಮಂದಿರದ ಮುಂಭಾಗದ ಗುರುವಾರ ಡಾ. ರಾಜ್ ಕುಮಾರ್ ಜೋಡಿ ರಸ್ತೆಯ ವ್ರತ್ತದಲ್ಲಿ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ, ಕೇಕ್ ಕತ್ತರಿ. ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ಕೆ. ಎಸ್. ಗಣೇಶ್ ಮಾತನಾಡಿ, ಡಾ.ರಾಜಕುಮಾರ್ ಕನ್ನಡಿಗರು ಅಭಿಮಾನಿಸುವ ಮೇರು ಪರ್ವತದ ವ್ಯಕ್ತಿಯಾಗಿದ್ದರು. ಕರ್ನಾಟಕ ಮಾತ್ರವಲ್ಲದೆ ಜಗತ್ತಿನಲ್ಲೆಲ್ಲ ಕನ್ನಡತನವನ್ನು ಪಸರಿಸಿದರು. ಕರ್ನಾಟಕ ಇತಿಹಾಸದ ಮಹಾನ್ ವ್ಯಕ್ತಿಗಳನ್ನು ತಮ್ಮ ಪಾತ್ರಗಳ ಮೂಲಕ ಪರಿಚಯಿಸಿ, ಕನ್ನಡಿಗರ ಹಿರಿಮೆ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಿದರು. ಕೋಲಾರ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಚಿತ್ರಗಳ ನೇರ ಬಿಡುಗಡೆಗೆ ಕಾರಣಕರ್ತರಾಗಿ ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡುವಲ್ಲಿ ಕಾರಣಕರ್ತರಾಗಿದ್ದರು ಎಂದರು.
ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ಮಾತನಾಡಿ, ಸಿಂಗನಲ್ಲೂರು ಪುಟ್ಟಸ್ವಾಮಯ್ಯ ರವರ ಮಗನಾಗಿ ಮುತ್ತುರಾಜ್ ೨೪ ಏಪ್ರಿಲ್ ೧೯೨೯ ರಲ್ಲಿ ಜನಿಸಿ ಸಿನಿಮಾರಂಗದ ಮೂಲಕ ಡಾ. ರಾಜ್‌ಕುಮಾರ್ ಎಂಬ ನಾಮದಿಂದ ಹೆಚ್ಚು ಜನಪ್ರಿಯವಾದ ಒಬ್ಬ ಭಾರತೀಯ ಶ್ರೇಷ್ಠ ನಟ ಮತ್ತು ಗಾಯಕ. ಇವರನ್ನು ನಟ ಸಾರ್ವಭೌಮ. ಗಾನಗಂಧರ್ವ. ರಸಿಕರ ರಾಜ. ಪದ್ಮಭೂಷಣ. ಇನ್ನು ಹಲವಾರು ಹೆಸರುಗಳಿಂದ ಜನಪ್ರಿಯವಾಗಿ ಕರೆಯುತ್ತಾರೆ.
ಅವರು ಕರ್ನಾಟಕ ರತ್ನ ಪ್ರಶಸ್ತಿ ಜೊತೆಗೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಡಿದ್ದಾರೆ. ಬಂಗಾರದ ಮನುಷ್ಯ ಚಿತ್ರದಲ್ಲಿ ಅವರ ಅದ್ಭುತವಾದ ನಟನೆ. ಅವರು ಹಾಗೂ ಅವರು ಹಾಡಿರುವ ಚಲನಚಿತ್ರ ಗೀತೆಗಳು ಹಾಗೂ ಭಕ್ತಿ ಗೀತೆಗಳು ಎಂದಿಗೂ ಕನ್ನಡಿಗರು ಮರೆಯುವಂತಿಲ್ಲ. ಡಾ. ರಾಜಕುಮಾರ್ ಅವರು ಗೋಕಾಕ್ ಚಳುವಳಿಯಂತಹ ಅನೇಕ ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲುತ್ತಿದ್ದರು. ಇವರ ಹುಟ್ಟುಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡಾ. ರಾಜಕುಮಾರ್ ಜೋಡಿ ರಸ್ತೆಯಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ ಅಣ್ಣಾವ್ರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಇದಕ್ಕೂ ಮೊದಲು ಕಾಶ್ಮೀರ ನಡೆದ ಘಟನೆಯನ್ನು ಖಂಡಿಸಿ, ಹುತಾತ್ಮರ ಆತ್ಮಕ್ಕೆ ಶಾಂತಿಯನ್ನು ಕೋರಿ ಒಂದು ನಿಮಿಷಗಳ ಕಾಲ ಮೌನಚರಣೆ ಮಾಡಲಾಯಿತು.
ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಆ.ಕೃ. ಸೋಮಶೇಖರ್, ಕೆ.ಎನ್.ರವೀಂದ್ರನಾಥ್ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಕೆ.ಎನ್. ಪ್ರಕಾಶ್, ಎಂ ಎನ್. ಮಂಜುನಾಥ್, ಜಿಲ್ಲಾ ಸಂಚಾಲಕ ಕೆ. ಅಮರನಾಥ್ ಸ್ವಾಮಿ ಹಾಗೂ ತಾಲೂಕು ಅಧ್ಯಕ್ಷ ಬಿ. ಮುನಿರಾಜು, ಕಾರ್ಮಿಕ ಘಟಕದ ಅಧ್ಯಕ್ಷ ಲೋಕನಾಥ್ ಸಿಂಗ್, ರಮೇಶ್ ಬಾಬು ಅರೋಗ್ಯನಾಥ್ ಮುಂತಾದವರು ಇದ್ದರು.
ಚಿತ್ರ ೨೪ ಕೆ.ಎಲ್.ಆರ್. ೦೫ : ಜಯಕರ್ನಾಟಕ ವತಿಯಿಂದ ನಗರದ ಬಸ್ ನಿಲ್ದಾಣದ ಡಾ.ರಾಜ್‌ಕುಮಾರ್ ಜೋಡಿರಸ್ತೆಯಲ್ಲಿ ೯೬ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.