ಮೂಡಿಗೆರೆ: ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಗಡಿಯುದ್ದಕ್ಕೂ ಹಾದು ಹೋಗುವ ಜಪಾವತಿ ನದಿಗೆ ಕೆಲ ಎಸ್ಟೇಟ್ ಮಾಲೀಕರು ಕಾಫಿ ಸಂಸ್ಕರಿಸಿದ ತ್ಯಾಜ್ಯಯುಕ್ತ ಪಲ್ಪರ್ ನೀರು
ಹರಿಯಬಿಟ್ಟಿದ್ದರಿಂದ ನದಿ ಸಂಪೂರ್ಣ ಕಲುಷಿತಗೊಂಡಿದ್ದು ಮೀನು ಸೇರಿದಂತೆ ಜಲಚರಗಳ ಸರ್ವನಾಶಕ್ಕೆ ಕಾರಣವಾಗಿದೆ.
ಎತ್ತಿನಭುಜ ಗುಡ್ಡ ಪ್ರದೇಶದಿಂದ ಹರಿಯುತ್ತಿರುವ ಜಪಾವತಿ ನದಿ ಊರುಬಗೆ, ಮೇಕನಗದ್ದೆ, ದೇವರುಂದ, ಕಜ್ಜೆಹಳ್ಳಿ, ಕಿರುಗುಂದ ಹೆಗ್ಗರವಳ್ಳಿ ಮೂಲಕ ಸಾಗಿ ಹೇಮಾವತಿ ನದಿಯನ್ನು
ಸೇರಿಕೊಳ್ಳುತ್ತದೆ. ನದಿ ಈ ಭಾಗದ ಜನರ ಜೀವನಾಡಿಯಾಗಿದೆ. ಕಿರುಗುಂದ, ಹಂತೂರು, ಊರುಬಗೆ ಗ್ರಾಪಂನಿಂದ ಗ್ರಾಮಸ್ಥರಿಗೆ ಜಪಾವತಿ ನದಿಯಿಂದ ಕುಡಿಯುವ ನೀರು ಪೂರೈಕೆ
ಮಾಡಲಾಗುತ್ತದೆ. ಕಾಫಿ ತೋಟಗಳಿಗೆ ನೀರಾಯಿಸಲು ಈ ನದಿಯ ನೀರನ್ನೇ ಬೆಳೆಗಾರರು ಬಳಸಿಕೊಳ್ಳುತ್ತಾರೆ. ಪ್ರತಿವರ್ಷ ಬೇಸಿಗೆಯಲ್ಲಿ ಜಪಾವತಿ ನದಿಯಲ್ಲಿ ಅಲ್ಪ ಪ್ರಮಾಣದ ನೀರು
ಹರಿಯುತ್ತದೆ. ನದಿಯ ಉದ್ದಕ್ಕೂ ಅಲ್ಲಲ್ಲಿ ಪಂಪ್‌ಸೆಟ್ ಅಳವಡಿಸಿ ನೀರನ್ನು ಎತ್ತುತ್ತಿದ್ದರೂ ಯಾರಿಗೂ ಕೊರತೆ ಇಲ್ಲದಂತೆ ಈ ನದಿಯಿಂದ ರೈತರ ಬೆಳೆಗೂ ಮತ್ತು ಗ್ರಾಮಸ್ಥರ ಬಳಕೆಗೂ
ಸಾಕಷ್ಟು ನೀರು ದೊರೆಯುತ್ತದೆ. ಇಷ್ಟೊಂದು ಅನುಕೂಲ ಕಲ್ಪಿಸಿರುವ ನದಿಯನ್ನು ಕಲುಷಿತಗೊಳಿಸಲಾಗುತ್ತಿದೆ. ಕುಡಿಯಲು ಯೋಗ್ಯವಿಲ್ಲ
ಕಾಫಿ ಕೊಯ್ಲದ ಬಳಿಕ ಪ್ರತಿದಿನ ಸಂಜೆ ಎಸ್ಟೇಟ್‌ಗಳಲ್ಲಿ ಕಾಫಿ ಸಂಸ್ಕರಣೆ ನಡೆಯುತ್ತದೆ. ಸಂಸ್ಕರಣೆಯಿಂದ ಬರುವ ತ್ಯಾಜ್ಯಯುಕ್ತ ಪಲ್ಪರ್ ನೀರನ್ನು ಈ ನದಿಗೆ ಹರಿಯಬಿಡಲಾಗುತ್ತದೆ.
ಇದರಿಂದ ನದಿ ನೀರು ಸಂಪೂರ್ಣ ಕಲುಷಿತಗೊಂಡು ಕಪ್ಪುಬಣ್ಣಕ್ಕೆ ತಿರುಗಿದೆ. ಇದರಿಂದ ನದಿಯ ಪರಿಸರದಲ್ಲಿ ದುರ್ನಾಥ ಬೀರುತ್ತಿದೆ. ನದಿಯ ನೀರು ಮಲಿನವಾಗಿರುವ ಕಾರಣ ಕುಡಿಯಲು
ಯೋಗ್ಯ ಇಲ್ಲದಂತಾಗಿದೆ.