ನ್ಯೂಸ್

ಜನಸಂದಣಿಯಿಂದ ಕರೊನಾ ಹರಡದಂತೆ ಎಚ್ಚರಿಕೆ ಅಗತ್ಯ, ಶಾಸಕ ಎ.ಟಿ.ರಾಮಸ್ವಾಮಿ ಸಲಹೆ

ಅರಕಲಗೂಡು: ಕರೊನಾ ಮಾರಕ ರೋಗವಾಗಿದ್ದು ಜನಸಂದಣಿ ನಡುವೆ ಎಚ್ಚರಿಕೆಯ ನಡೆ ಅನುಸರಿಸುವ ಮೂಲಕ ಸೋಂಕು ಹರಡದಂತೆ ನಿಗಾ ವಹಿಸುವುದು ಒಳಿತು ಎಂದು ಶಾಸಕ ಎ.ಟಿ. ರಾಮಸ್ವಾಮಿ ಮನವಿ ಮಾಡಿದರು.

ಪಟ್ಟಣದ ತರಕಾರಿ ಮಾರುಕಟ್ಟೆ ಪ್ರದೇಶಕ್ಕೆ ಬೆಳಂ ಬೆಳಗ್ಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ತಾಲೂಕು ಆಡಳಿತ ಲಾಕ್ ಡೌನ್ ಆರಂಭದಿಂದಲೂ ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶಕ್ತಿಮೀರಿ ಶ್ರಮಿಸುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮುಂದೆಯೂ ಇದೇ ರೀತಿ ಎಲ್ಲರೂ ಸಾಮಾಜಿಕ ಅಂತರ ಕಾಪಾಡುವುದು ಅತ್ಯವಶ್ಯಕವಾಗಿದೆ ಎಂದು ಸಲಹೆ ನೀಡಿದರು.

ಹಾರ್ಡ್ ವೇರ್ ಅಂಗಡಿಗಳು,ದಿನಸಿ ಅಂಗಡಿಗಳು , ರೈತರ ರಸ ಗೊಬ್ಬರದ ಅಂಗಡಿಗಳು, ತರಕಾರಿ ಅಂಗಡಿಗಳು, ಎಲೆಕ್ಟ್ರಿಕಲ್ ಅಂಗಡಿಗಳು, ಭಾಗಶಃ ತೆರೆದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳೊಂದಿಗೆ ಜನರಿಗೆ ತಿಳಿಸಿದರು.

ಲಾಕ್ ಡೌನ್ ಸಡಿಲಿಕೆ ಪರಿಣಾಮ ಇಂದು ಜನ ಜಗುಂಳಿ ಸಾಮಾನ್ಯವಾಗಿದ್ದು ಬೈಕ್ ಗಳ ಸಂಚಾರ ಎಂದಿಗಿಂತ ಸ್ವಲ್ಪ ಹೆಚ್ಚಾಗಿರುವುದು ಕಂಡು ಬಂದಿತು. ಪೋಲೀಸರು ಅವಶ್ಯಕತೆ ಇರುವ ಜಾಗದಲ್ಲಿ ಕರ್ತವ್ಯ ನಿರತರಾಗಿದ್ದು ಸಾಮಾಜಿಕ ಅಂತರಕ್ಕೆ ಒತ್ತು ನೀಡುತ್ತಿರುವುದು ಕಂಡುಬಂತು.
ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಸಬ್ ಇನ್ಸ್ ಪೆಕ್ಟರ್ ವಿಜಯಕೃಷ್ಣ ಇತರರು ಇದ್ದರು.