ನ್ಯೂಸ್

ಜನಸಂಚಾರವಿಲ್ಲದೇ ಬಿಕೋ ಎಂದ ರಸ್ತೆಗಳು: ವಾರಾಂತ್ಯದ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಚ್ಚಿದ ವ್ಯಾಪಾರಿಗಳು

ರಾಮನಗರ : ಕರೊನಾ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಾರಾಂತ್ಯದ ಲಾಕ್‌ಡೌನ್‌ಗೆ ಜಿಲ್ಲೆಯ ಜನತೆಯಿಂದ ಉತ್ತಮ ಬೆಂಬಲ ವ್ಯಕ್ತವಾಯಿತು.

ಜಿಲ್ಲೆಯಲ್ಲಿ ದಿನೇದಿನೆ ಸೋಂಕು ಉಲ್ಬಣವಾಗುತ್ತಿರುವುದನ್ನು ಅರಿತಿರುವ ಜನತೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶಗಳೆಂಬ ಭೇದವಿಲ್ಲದೆ ಉತ್ತಮವಾಗಿ ಸ್ಪಂದಿಸಿದರು.

ಎಲ್ಲವೂ ಬಂದ್: ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೋಟೆಲ್, ಬಾರ್‌ಗಳು ಮತ್ತು ಬೀದಿ ಬದಿ ಅಂಗಡಿಗಳನ್ನು ಮುಚ್ಚಿಸುವ ಆದೇಶವನ್ನು ನೀಡಿತ್ತು. ಇದರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ವ್ಯಾಪಾರಿಗಳು ಬಂದ್ ಮಾಡಿದ್ದರು. ಇದರಿಂದಾಗಿ ಇಡೀ ಜಿಲ್ಲೆ ಶುಕ್ರವಾರ ಸಂಜೆಯಿಂದಲೇ ಮೌನಕ್ಕೆ ಶರಣಾಗುವ ಮೂಲಕ ಜನರು ಕರೊನಾಗೆ ಸೆಡ್ಡು ಹೊಡೆಯುವ ಸರ್ಕಾರದ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. ಸದಾ ಜನರಿಂದಲೇ ಗಿಜಿಗುಡುತ್ತಿದ್ದ ಜಿಲ್ಲಾ ಕೇಂದ್ರ ರಾಮನಗರ ಸೇರಿದಂತೆ, ಎಲ್ಲ ಪ್ರಮುಖ ನಗರ ಪಟ್ಟಣಗಳ ರಸ್ತೆಗಳು ಖಾಲಿ ಖಾಲಿಯಾಗಿದ್ದವು.

ಬೆಳಗ್ಗೆ 10ರವರೆಗೆ ಓಡಾಟ: ಅಗತ್ಯ ವಸ್ತುಗಳ ಖರೀದಿಸಲು ಬೆಳಗ್ಗೆ 10 ಗಂಟೆ ವರೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಜನ ಜಂಗುಳಿ ಎಂದಿನಂತೆ ಇತ್ತು. ಅಲ್ಲದೆ, ಜನತೆ ಪರಸ್ಪರ ಅಂತರವನ್ನು ಕಾಯ್ದುಕೊಳ್ಳದೆ ಅಗತ್ಯ ಸಾಮಗ್ರಿ ತೆಗೆದುಕೊಳ್ಳಲು ಮುಂದಾಗಿದ್ದು ಕಂಡು ಬಂತು. ಆದರೆ, 10 ಗಂಟೆ ಆಗುತ್ತಿದ್ದಂತೆ ಅಖಾಡಕ್ಕೆ ಇಳಿದ ಪೊಲೀಸರು ಸಾರ್ವಜನಿಕರು ಗುಂಪುಗೂಡದಂತೆ ಸೂಚನೆ ನೀಡಿ, ಮನೆಗಳಿಗೆ ತೆರಳುವಂತೆ ತಿಳಿ ಹೇಳಿದರು.

ಜನ, ಬಸ್ ಎರಡೂ ಇಲ್ಲ: ಶನಿವಾರ ಒಂದೆಡೆ ಜನ ಮನೆ ಬಿಟ್ಟು ಹೊರಬರದಿದ್ದರೆ, ಮತ್ತೊಂದೆಡೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು, ಆಟೋಗಳು, ರೈಲುಗಳು ಸಹ ಸಂಚಾರ ನಡೆಸಲಿಲ್ಲ. ಬೆಂಗಳೂರು - ಮೈಸೂರು ಹೆದ್ದಾರಿ ಶನಿವಾರ ಬಂತೆಂದರೆ ಸಂಪೂರ್ಣವಾಗಿ ವಾಹನಗಳಿಂದಲೇ ತುಂಬಿರುತ್ತಿತ್ತು. ಆದರೆ ಕರ್ಫ್ಯೂನಿಂದಾಗಿ ಇಡೀ ರಸ್ತೆ ವಾಹನಗಳಿಲ್ಲದೇ ಬಿಕೋ ಎನ್ನುತಿತ್ತು. ಅಲ್ಲದೆ, ಕೆಲವು ಯುವಕರು ಖಾಲಿ ರಸ್ತೆಯನ್ನು ಕಣ್ತುಂಬಿಕೊಳ್ಳಲು ಬೈಕ್‌ಗಳಲ್ಲಿ ಓಡಾಟ ನಡೆಸುತಿದ್ದುದು ಕಂಡು ಬಂತು.

ಊಟಕ್ಕಾಗಿ ಪರದಾಟ

ಮತ್ತೊಂದೆಡೆ ಬೀದಿಬದಿ ವಾಸಿಗಳಿಗೆ ಶನಿವಾರ ಊಟ ಇಲ್ಲದೆ ಪರದಾಡಿದ ಘಟನೆಯೂ ನಡೆಯಿತು. ಬಹುತೇಕ ಹೋಟೆಲ್ ಮತ್ತು ಬೇಕರಿಗಳು ಬಂದ್ ಆಗಿದ್ದ ಪರಿಣಾಮ ಬೀದಿ ಬದಿವಾಸಿಗಳಿಗೆ ಅನ್ನ ನೀರು ಇಲ್ಲದಾಗಿ ಪೊಲೀಸರ ಬಳಿ ತೆರಳಿ ತಮಗೆ ಊಟದ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡ ಘಟನೆಗಳು ನಡೆದವು. ಇದರ ನಡುವೆ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ನಗರದಲ್ಲಿ ಬೀದಿ ಬದಿವಾಸಿಗಳಿಗೆ ಹಾಗೂ ಅಗತ್ಯವಿರುವವರಿಗೆ ಊಟದ ಪೊಟ್ಟಣಗಳನ್ನು ನೀಡುವ ಮೂಲಕ ಹಸಿವಿನ ದಾಹವನ್ನು ತಣಿಸುವ ಕೆಲಸ ನಡೆಯಿತು.

ಹಳ್ಳಿಗಳಲ್ಲೂ ಬಂದ್

ಸಾಮಾನ್ಯವಾಗಿ ಬಂದ್- ಕರ್ಫ್ಯೂ ಎಂದರೆ ಅವು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸೀಮಿತ. ಆದರೆ ಕರೊನಾ ವಿರುದ್ಧದ ಬಂದ್‌ಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಎಲ್ಲೆಡೆ ಅಂಗಡಿ ಮುಂಗಟ್ಟು ಮುಚ್ಚಿದ್ದು ಕಂಡು ಬಂದಿದ್ದಲ್ಲದೆ, ಜನತೆ ಸಹ ಬೀದಿಗಿಳಿಯದೇ ಕರ್ಫ್ಯೂಗೆ ಬೆಂಬಲ ಸೂಚಿಸಿದರು.