ನ್ಯೂಸ್

ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿ ಮುಖ್ಯ

ಚಿಕ್ಕೋಡಿ: ಭಾರತ ಜನಭರಿತವಾಗಿರುವುದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಜನಜಾಗೃತಿ ಅವಶ್ಯ ಎಂದು ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಗಡೇದ ಹೇಳಿದರು.

ಇಲ್ಲಿನ ಕೆಎಲ್‌ಇ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಪುರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಸೂಕ್ತ ವಯಸ್ಸಿನಲ್ಲಿ ಮದುವೆ, ೨ ಮಕ್ಕಳ ನಡುವೆ ೩ ವರ್ಷಗಳ ಅಂತರ ಇರಬೇಕು. ಬಾಲ ಗರ್ಭಿಣಿಯಾದರೆ ಆಗುವ ಸಮಸ್ಯೆಗಳ ಅರಿವು ಮತ್ತು ಜನಸಂಖ್ಯೆ ನಿಯಂತ್ರಣ ಬಗ್ಗೆ ಅರಿವು ಹೊಂದಬೇಕು. ತಾಯಿಯು ಆರೋಗ್ಯ ಕಾಪಾಡಿಕೊಂಡು ಜನಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಬಾಗಾಯಿ ಮಾತನಾಡಿ, ಜನಸಂಖ್ಯೆ ಹೆಚ್ಚಳದ ಜಾಗೃತಿ ಮೂಡಿಸಿ ಆರೋಗ್ಯಕರ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಕಾಲೇಜು ಪ್ರಾಚಾರ್ಯ ಡಾ.ಕಿರಣ ಮುತ್ನಾಳಿ ಮಾತನಾಡಿ, ಜನಸಂಖ್ಯೆ ನಿಯಂತ್ರಣದಲ್ಲಿ ಲಿಂಗ ಸಮಾನತೆ, ಉತ್ತಮ ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಕುಟುಂಬ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯ ಎಂದರು.

ಕಾಲೇಜು ಉಪನ್ಯಾಸಕ ಡಾ.ರವಿ ಮಡಿವಾಳರ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷ ಕಾಂಬಳೆ, ರಾಜಶೇಖರ ನಾಯಿಕ, ಡಾ.ಶಿವಾನಂದ ಬಿರಾದಾರ, ಡಾ.ಸತೀಶ ಕರಜಗಿ ಇತರರಿದ್ದರು.