ಗುಂಡ್ಲುಪೇಟೆ: ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್ ಔಷಧ ಕೇಂದ್ರವನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲೇಂದು ಕೇಂದ್ರ ಸರಕಾರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜನಔಷಧ ಕೇಂದ್ರವನ್ನು ತೆರೆದು ಔಷಧಗಳು ದೊರಕುವಂತೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಈ ಕೇಂದ್ರವನ್ನು ಮುಚ್ಚುವ ಮೂಲಕ ಜನ ವಿರೋಧಿ ನೀತಿ ಅನುಸರಿಸಿದೆ ಎಂದು ಕಿಡಿಕಾರಿದರು.
ಈ ಕೇಂದ್ರದಿಂದ ಸಕ್ಕರೆ ಕಾಯಿಲೆ, ಬಿಪಿ, ಉಸಿರಾಟದ ಸಮಸ್ಯೆ ಇತರ ರೋಗಗಳಿಗೆ ನಿಯಮಿತವಾಗಿ ಔಷಧ ಬಳಸುವ ಲಕ್ಷಾಂತರ ಬಡರೋಗಿಗಳಿಗೆ ತುಂಬಾ ಉಪಯೋಗವಾಗುವ ಜತೆಗೆ ಆರೋಗ್ಯಕ್ಕಾಗಿ ಮಾಡುವ ಖರ್ಚಿನಲ್ಲಿ ದೊಡ್ಡ ಪಾಲು ಉಳಿತಾಯವಾಗುತ್ತಿದೆ. ಆದರೆ, ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಹಂತಗಳಲ್ಲಿಯೂ ಸಮಸ್ಯೆಗಳು ತಾಂಡವವಾಡುತ್ತಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿಗದಿತ ವೇಳೆಗೆ ಚಿಕಿತ್ಸೆ ಸಿಗದೆ ಗರ್ಭಿಣಿಯರು ಮತ್ತು ಬಾಣಂತಿಯರು ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ರೋಗಿಗಳು ಖಾಸಗಿ ಕ್ಲಿನಿಕ್‌ನತ್ತ ಮುಖ ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜನರಿಕ್ ಮಳಿಗೆಗಳನ್ನು ಮುಚ್ಚುವುದರಿಂದ ಕಡಿಮೆ ದುಡ್ಡಿಗೆ ಲಭ್ಯವಾಗುತ್ತಿದ್ದ ಔಷಧಗಳಿಗೆ ಬಡರೋಗಿಗಳು ಸಾವಿರಾರು ರೂ. ತೆರಬೇಕಾಗುತ್ತದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಸರ್ಕಾರ ಮತ್ತಷ್ಟು ಬರೆ ಎಳೆಯಲು ನಿರ್ಧರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷರಾದ ಎಲ್.ಸುರೇಶ್, ಎನ್.ಮಲ್ಲೇಶ್, ದೇವರಹಳ್ಳಿ ಮಹೇಶ್, ಮಂಗಳಮ್ಮ, ಗೀತಾ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದರು.