ಬೀರೂರಿನ ಜಿಎ್ಜಿಸಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯನ್ನು ಸಿವಿಲ್ ನ್ಯಾಯಾಧೀಶೆ ಎಚ್.ವಿ. ಸವಿತಾರಾಣಿ ಉದ್ಘಾಟಿಸಿದರು. ಡಾ. ರವಿಕುಮಾರ್, ಬಿ.ಸಿ.ಮಮತಾ, ಡಾ. ಹರೀಶ್‌ಕುಮಾರ್ ಇದ್ದರು. 
ನ್ಯೂಸ್

ಜನರಲ್ಲಿ ಎಚ್‌ಐವಿ ಬಗ್ಗೆ ಜಾಗೃತಿ ಇರಲಿ

ಬೀರೂರು: ಜಗತ್ತನ್ನು ಕಾಡಿದ ಮಾರಕ ರೋಗಗಳಲ್ಲಿ ಏಡ್ಸ್ ಕೂಡ ಒಂದು. ಈ ಕಾಯಿಲೆ ಬಗ್ಗೆ ಭಯಪಡದೆ ಜಾಗೃತಿ ಹೊಂದಬೇಕು ಎಂದು ಕಡೂರು 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಚ್.ವಿ.ಸವಿತಾರಾಣಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರಿನ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಕಾನೂನು ಸೇವೆಗಳ ಪ್ರಾಧಿಕಾರ, ಕಡೂರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕರೊನಾ ರೋಗಕ್ಕೆ ಜನ ಹೆದರಿದಂತೆ ಏಡ್ಸ್‌ಗೂ ಹೆದರುವ ಕಾಲವೊಂದಿತ್ತು. ಲೈಂಗಿಕ ಸಂಪರ್ಕ, ಒಬ್ಬರು ಬಳಸಿದ ಸೂಜಿ, ಕತ್ತರಿಯನ್ನು ಇನ್ನೊಬ್ಬರು ಬಳಸಿದಾಗ ಏಡ್ಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಏಡ್ಸ್‌ಗೆ ಸೂಕ್ತ ಚಿಕಿತ್ಸೆ ಇಲ್ಲದೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಈ ಕಾಯಿಲೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಏಡ್ಸ್ ತಡೆಗಟ್ಟಲು ಸಾಧ್ಯವಾಯಿತು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ಎಚ್‌ಐವಿ ಹರಡುವ, ತಡೆಗಟ್ಟುವ ವಿಧಾನಗಳು ಮತ್ತು ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ. ಸರಿಯಾದ ಚಿಕಿತ್ಸೆ ಹಾಗೂ ಉತ್ತಮ ಜೀವನಶೈಲಿ ಮೂಲಕ ಏಡ್ಸ್ ವಿರುದ್ಧ ಹೋರಾಡಿ ಗೆಲ್ಲಬಹುದು ಎಂದರು.

ಜಿಎ್ಜಿಸಿ ಪ್ರಾಚಾರ್ಯ ಡಾ. ಹರೀಶ್‌ಕುಮಾರ್, ಬೀರೂರು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಕೆಂಚೇಗೌಡ, ಸಮಾಲೋಚಕ ಲೋಹಿತ್, ಪಿಎಸ್‌ಐ ಸಜಿತ್‌ಕುಮಾರ್, ಪ್ರಾಧ್ಯಾಪಕ ಡಾ. ಬಿ.ಮಲ್ಲಿಕಾರ್ಜುನ್, ರೆಡ್‌ಕ್ರಾಸ್ ಘಟಕದ ಸಂಚಾಲಕರಾದ ಆರ್.ಕೇದಾರನಾಥಸ್ವಾಮಿ, ಬಸವರಾಜ್, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಇದ್ದರು.