ನ್ಯೂಸ್

ಜನರ ಹೋರಾಟಗಳು ಧರ್ಮ ಸಂಘರ್ಷವಲ್ಲ : ಸಚಿವ ಮುನಿರತ್ನ ಅಭಿಮತ, ಪ್ರತಿಭಟನೆಗಳ ಹಿಂದೆ ಸರ್ಕಾರವಿಲ್ಲ

ಕೋಲಾರ: ರಾಜ್ಯದಲ್ಲಿ ಹಲವು ವಿಚಾರಗಳಿಗಾಗಿ ಹೋರಾಟಗಳು ನಡೆಯುತ್ತಿವೆ. ಆದರೆ ಅದನ್ನು ಧರ್ಮ ಸಂಘರ್ಷ ಅನ್ನೋದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವು ವಿಚಾರಗಳಲ್ಲಿ ಅನ್ಯಾಯವಾಗ್ತಿದೆ ಎಂದು ಸಂಘಟನೆಗಳು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾ ಪ್ರತಿಭಟನೆ, ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದೇನೂ ಅಲ್ಲ. ಆದರೆ ಇದಾವುದಕ್ಕೂ ಸರ್ಕಾರದ ಪ್ರೋತ್ಸಾಹವಿಲ್ಲ. ನಾವ್ಯಾರೂ ಯಾವ ಸಂಘಟನೆ, ಧರ್ಮದವರಿಗೂ ಬೆಂಬಲಿಸುತ್ತಿಲ್ಲ. ವಿರೋಧ ಪಕ್ಷದವರು ಸರ್ಕಾರ ಪ್ರೋತ್ಸಾಹಿಸುತ್ತಿದೆ, ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದೆಲ್ಲ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಜಾಬ್​ ಸಂಬಂಧ ಹೈಕೋರ್ಟ್​ ತೀರ್ಪು ನೀಡಿದ ಮೇಲೂ ಕೆಲವರು ನ್ಯಾಯಾಲಯ ತೀರ್ಪನ್ನು ವಿರೋಧಿಸುವಂತೆ ನಡೆದುಕೊಂಡಿದ್ದರಿಂದ ವಿವಿಧ ಸಂಘಟನೆಗಳು ತಿರುಗಿ ಬಿದ್ದು ಏನೆಲ್ಲ ಘಟನೆಗಳು ನಡೆದವೆಂದು ಎಲ್ಲರಿಗೂ ತಿಳಿದಿದೆ. ವಿರೋಧ ಪಕ್ಷದ ಮುಖಂಡರು ಸರ್ಕಾರ ಅಸಮರ್ಥ ಎಂದೆಲ್ಲ ಟೀಕಿಸುವುದರಲ್ಲಿ ರಾಜಕೀಯ ದುರುದ್ದೇಶವಿದೆ. ಸರ್ಕಾರ ಸಂವಿಧಾನ ಪರಿಧಿಯಲ್ಲೇ ಕೆಲಸ ನಿರ್ವಹಿಸಬೇಕಾಗುತ್ತದೆ ಎಂಬುದನ್ನು ಎಲ್ಲರೂ ಅರಿತು ಮಾತನಾಡಿದರೆ ಒಳಿತು ಎಂದರು.

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮರ್ಥರು ಎಂದಿರುವುದು ಸರಿಯಲ್ಲ. ಯಾರ ಕಾಲದಲ್ಲಿ ಪೊಲೀಸ್​ ಅಧಿಕಾರಿ ಗಣಪತಿ ಆತ್ಮಹತ್ಯೆ ಮಾಡಿಕೊಂಡು, ಗೃಹ ಮಂತ್ರಿ ರಾಜೀನಾಮೆ ನೀಡಿದರೆಂಬುದನ್ನು ಮನನ ಮಾಡಿಕೊಂಡರೆ ಸಾಕು ಎಂದು ತಿರುಗೇಟು ನೀಡಿದರಲ್ಲದೆ, ಗೃಹ ಸಚಿವರು ಸಮರ್ಥರಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಗಲಭೆಗಳು ನಡೆಯಲಿಲ್ಲವೇ? ಅಂದಿನ ಗೃಹ ಮಂತ್ರಿಗಳು ರಾಜೀನಾಮೆ ನೀಡಿರಲಿಲ್ಲವೇ? ಅವರು ಅಸಮರ್ಥರಲ್ಲವೇ? ರಾಜ್ಯದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಇದಕ್ಕೆ ಸರ್ಕಾರ ಹೊಣೆ ಅಲ್ಲ. ಧಾರವಾಡದಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿ ಧ್ವಂಸಗೊಳಿಸಿದರೆ ಅದಕ್ಕೂ ಸರ್ಕಾರವೇ ಕಾರಣ ಎನ್ನುವವರಿಗೆ ಏನನ್ನಬೇಕು? ಯಾವ ರೀತಿ ಉತ್ತರ ಕೊಡಬೇಕು? ಸರ್ಕಾರಕ್ಕೆ ಸಾಕಷ್ಟು ಕೆಲಸವಿರುತ್ತದೆ ಎಂಬುದನ್ನು ವಿರೋಧಿಸುವವರು ಅರ್ಥೈಸಿಕೊಂಡರೆ ಸಾಕು ಎಂದರು.

ಬೆಂಗಳೂರಿನ ಜೆಜೆ ನಗರದ ಚಂದ್ರು ಕೊಲೆ ಪ್ರಕರಣದಲ್ಲಿ ಗೃಹ ಸಚಿವರು ಅವರಿಗಿದ್ದ ಮಾಹಿತಿ ಹೇಳಿದ್ದರು. ಚಂದ್ರು ಕುಟುಂಬದವರು ಈಗ ಅದನ್ನೇ ಹೇಳುತ್ತಿದ್ದಾರೆ. ಅವರೇನೂ ವೈಯಕ್ತಿಕವಾಗಿ ಹೇಳಿಕೆ ಕೊಟ್ಟಿರಲಿಲ್ಲ. ಊಹಾಪೋಹದ ಹೇಳಿಕೆಯನ್ನೂ ನೀಡಿರಲಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದ ವಿರೋಧಿ ಮುಖಂಡರು ಗೃಹ ಸಚಿವರನ್ನು ಅಸಮರ್ಥರು ಎಂದು ಮಾತನಾಡುವುದು ಸರಿಯಲ್ಲ. ಆದರೂ ಸತ್ಯದ ಅರಿವಿಲ್ಲದಂತೆ ಮಾತನಾಡುತ್ತಿದ್ದಾರೆ. ಸಾವಿನಲ್ಲಿ ಮತಬ್ಯಾಂಕ್​ ಗಟ್ಟಿ ಮಾಡಿಕೊಳ್ಳಲು ಪೈಪೋಟಿಗೆ ಬಿದ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ. ಏಕೆಂದರೆ ಅದರ ಬಗ್ಗೆ ಎಲ್ಲೂ ಚರ್ಚೆ ನಡೆದಿಲ್ಲ. ಮಾಜಿ ಸಚಿವ ವರ್ತೂರು ಪ್ರಕಾಶ್​ ಬಿಜೆಪಿ ಸೇರ್ಪಡೆ ಬಗ್ಗೆ ವರಿಷ್ಠರು ತೀಮಾರ್ನಿಸುತ್ತಾರೆ. ಬಂಗಾರಪೇಟೆಯ ಚಂದ್ರಾರೆಡ್ಡಿಗೆ ಪಕ್ಷ ಸೇರ್ಪಡೆ ಸಂದರ್ಭ ಮಾತು ಕೊಟ್ಟಿದ್ದು, ಸ್ಥಾನಮಾನ ಒದಗಿಸುವ ಬಗ್ಗೆ ಪಕ್ಷದ ಸಭೆಯಲ್ಲಿ ಗಮನಸೆಳೆಯುತ್ತೇನೆ. ಬೆಲೆ ಏರಿಕೆ ಎಲ್ಲ ಸರ್ಕಾರದ ಅವಧಿಗಳಲ್ಲೂ ಆಗಿತ್ತು. ಪ್ರಸ್ತುತ ಕೆಲವು ಪದಾರ್ಥಗಳನ್ನು ಹೊರದೇಶಗಳಿಂದ ರ್ತ್ತು ಮಾಡಿಕೊಳ್ಳುತ್ತಿದ್ದು. ಯುದ್ಧ, ಮತ್ತಿತರ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಬೆಲೆ ಏರಿಕೆಯಾಗಿರುವುದು ಸತ್ಯ. ಆದರೆ ಸೂಕ್ತ ಸಂದರ್ಭದಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಬೆಲೆ ಇಳಿಕೆ ಕುರಿತು ತೀಮಾರ್ನ ತೆಗೆದುಕೊಳ್ಳುತ್ತಾರೆ ಎಂದು ಮುನಿರತ್ನ ಹೇಳಿದರು.

ಬಜೆಟ್​ನಲ್ಲಿ ಜಿಲ್ಲೆಗೆ ಆಹಾರ ಸಂಸ್ಕರಣಾ ಘಟಕ, ಶೀತಲಗೃಹ ಸ್ಥಾಪನೆ ಸಂಬಂಧ ಪ್ರಸ್ತಾಪವಿಲ್ಲದಿರಬಹುದು. ಹಾಗೆಂದು ಜಿಲ್ಲೆಗೆ ಅನ್ಯಾಯವಾಗಿದೆ ಎಂದೇನೂ ಅರ್ಥವಲ್ಲ. ಮಾತುಕೊಟ್ಟಂತೆ ಇವೆರಡನ್ನೂ ಮಾಡಿಕೊಡಲಾಗುವುದು. ಆ.15ರೊಳಗೆ ಕ್ರೀಡಾಂಗಣಕ್ಕೆ ಸಿಂಥೆಟಿಕ್​ ಟ್ರಾಕ್​ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುನಿರತ್ನ ತಿಳಿಸಿದರು.