ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್​ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸಹಕಾರ ಸಪ್ತಾಹದ ಸಮಾರೋಪದಲ್ಲಿ ರಾಜ್ಯ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಷೇಕ್​ ಅಹಮದ್​, ಟ್ಟಕಾಮಧೇನಹಳ್ಳಿ ಶಾಂತಮ್ಮ ಅವರನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಎಂಎಲ್​ಸಿ ಅನಿಲ್​ಕುಮಾರ್​ ಇತರರಿದ್ದ್ದರು. 
ನ್ಯೂಸ್

ಜನರ ಹಣಕ್ಕೆ ಕಾವಲುಗಾರರಂತೆ ಕೆಲಸ ಮಾಡಿ. ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಮತ

ಕೋಲಾರ: ಸಹಕಾರ ರಂಗದಲ್ಲಿ ಟೀಕೆಗಳು ಸಹಜ. ಆದರೆ ನಾವು ಜನರ ಹಣಕ್ಕೆ ಕಾವಲುಗಾರರಂತೆ ಕೆಲಸ ಮಾಡುತ್ತಿದ್ದೇವೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಮೂಲಕ ಸಂಸ್ಥೆ ಕಟ್ಟುವ ಕೆಲಸ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್​, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಕಾರಂಜಿಕಟ್ಟೆಯ ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪದಲ್ಲಿ ಸಹಕಾರ ರತ್ನ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿದರು.

ಕೆಟ್ಟ ಹೆಸರು, ಒಳ್ಳೆಯ ಹೆಸರು ಬರುತ್ತದೆ. ಆದರೆ ಅದೆಲ್ಲವನ್ನೂ ಮೀರಿ ನಾವು ಸರಿಯಾಗಿದ್ದೇವೆಯೇ, ಸಹಕಾರ ತತ್ವಗಳಿಗೆ ಗೌರವ ನೀಡುತ್ತಿದ್ದೇವೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಂಡು ಸಹಕಾರಿಗಳು ಮುನ್ನಡೆಯಬೇಕು. ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಸ್ಮರಣೀಯರಾಗಿದ್ದ ಮಳ್ಳೂರು ಪಾಪಣ್ಣ ಸ್ಥಾಪಿಸಿದ್ದ ಸಹಕಾರಿ ಆಸ್ಪತ್ರೆ ಪುನಶ್ಚೇತನಕ್ಕೆ ಸಹಕಾರಿ ಸಚಿವರಿಗೆ ಮನವಿ ಮಾಡುವುದಾಗಿ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.

ವಿಧಾನಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ಕುಮಾರ್​ ಮಾತನಾಡಿ, ಘಟಾನುಘಟಿ ನಾಯಕರಿದ್ದರೂ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಒಕ್ಕೂಟ ಇನ್ನೂ ಅಸ್ತಿತ್ವದಲ್ಲೇ ಇದೆ. ಇದರ ವಿರುದ್ಧ ಯಾರೂ ಮಾತನಾಡುತ್ತಿಲ್ಲ ಕಾರಣ ರೈತರ ಹಿತ ಮುಖ್ಯವೆಂದು ಭಾವಿಸಿದ್ದಾರೆ. ಆದರೆ ಕೋಲಾರ, ಚಿಕ್ಕಬಳ್ಳಾಪುರ ಒಕ್ಕೂಟ ಬೇರ್ಪಡಿಸಲು ನಡೆದ ಯತ್ನ ಖಂಡನೀಯ. ಆದರೆ ಸಹಕಾರ ವ್ಯವಸ್ಥೆಯಲ್ಲಿ ಇರುವವರು ಇದರ ವಿರುದ್ಧ ಧ್ವನಿ ಎತ್ತಲಿಲ್ಲ ಎಂದು ವಿಷಾದಿಸಿದರು. ಸಹಕಾರಿ ವ್ಯವಸ್ಥೆಗೆ ಕೆ. ಶ್ರೀನಿವಾಸಗೌಡರ ಬಳಿಕ ಹೆಸರು ತಂದವರು ಬ್ಯಾಲಹಳ್ಳಿ ಗೋವಿಂದಗೌಡರು. ಸಹಕಾರಿ ಅಭಿವೃದ್ಧಿ ನಡುವೆಯೂ 69 ವರ್ಷಗಳ ನಂತರವೂ ಸಹಕಾರಿ ರಂಗದಲ್ಲಿ ಸರ್ವರಿಗೂ ಪಾಲು ಸಿಕ್ಕಿಲ್ಲ, ಕೆಲವೇ ಜನರ ಹಿಡಿತದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿ, ಹೊಸಬರಿಗೆ ಜವಾಬ್ದಾರಿ ಸಿಗಬೇಕು ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಬಿ.ವಿ.ಗೋಪಿನಾಥ್​ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಸಹಕಾರ ಆಸ್ಪತ್ರೆ ಸ್ಥಾಪಿಸಿದವರು ಮಳ್ಳೂರಿನಲ್ಲಿ ಪಾಪಣ್ಣ, ಆದರೆ ಇಂದು ಆಸ್ಪತ್ರೆ ಮುಚ್ಚಿದೆ. ಈ ಹಿನ್ನೆಲೆಯಲ್ಲಿ ಅಲ್ಲೇ ರಾಜ್ಯಮಟ್ಟದ ಸಹಕಾರಿ ಸಪ್ತಾಹ ಆಚರಿಸುವ ಮೂಲಕ ಆಸ್ಪತ್ರೆ ಪುನಶ್ಚೇತನಗೊಳಿಸಿ ಪಾಪಣ್ಣನವರ ಕ್ಷಮೆ ಯಾಚಿಸಬೇಕು ಎಂದರು.

ಸನ್ಮಾನ: ಸಹಕಾರ ರತ್ನ ಪುರಸ್ಕೃತರಾದ ಘಟ್ಟಕಾಮಧೇನಹಳ್ಳಿ ಶಾಂತಮ್ಮ, ಕ್ಯಾಲನೂರು ನೂಲು ಬಿಚ್ಚಾಣಿಕೆ ಕೈಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಷೇಕ್​ ಅಹಮದ್​ ಹಾಗೂ ಪತ್ರಕರ್ತರಾದ ಬಿ.ವಿ.ಗೋಪಿನಾಥ್​, ಕೆ.ಎಸ್​.ಗಣೇಶ್​, ವಿ.ಮುನಿರಾಜು ಅವರನ್ನು ಜಿಲ್ಲಾ ಸಹಕಾರಿ ಯೂನಿಯನ್​ ವತಿಯಿಂದ ಸನ್ಮಾನಿಸಲಾಯಿತು.

ಸಹಕಾರಿ ಯೂನಿಯನ್​ ಅಧ್ಯಕ್ಷ ಡಾ.ಇ.ಗೋಪಾಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ವಿ.ಮುನಿರಾಜು, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್​.ಗಣೇಶ್​, ಯೂನಿಯನ್​ ಸಿಇಒ ಸಿಎಂ.ಲಕ್ಷ್ಮಿ, ಯೂನಿಯನ್​ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಪೆಮ್ಮಶೆಟ್ಟಿಹಳ್ಳಿ ಸುರೇಶ್​, ಅರುಣಮ್ಮ, ಷೇಕ್​ ಮೊಹಮದ್​, ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಕೋ.ನಾ.ಮಂಜುನಾಥ್​, ಸಿಇಒ ಜಿ.ಗಂಗಾಧರ್​, ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂದ ಕಾರ್ಯದರ್ಶಿ ಸುನಿತಾ, ಯೂನಿಯನ್​ ರವಿ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.