ಅರಕಲಗೂಡು: ತಾಲೂಕಿನ ಕಾಳೇನಹಳ್ಳಿ ಗ್ರಾಮದ ಗೌರಮ್ಮ ದೇವಸ್ಥಾನಕ್ಕೆ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ. ಗಿರೀಶ್ ಉಪ್ಪಾರ್ ಸೋಮವಾರ ಭೇಟಿ ನೀಡಿ, ಗೌರಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ದರ್ಶನ ಪಡೆದು, ನಂತರ ಜನರ ಅಹವಾಲು ಆಲಿಸಿದರು.
ಸಮುದಾಯದ ಜನರಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬುದಕ್ಕೆ ಗೌರಮ್ಮ ದೇವಸ್ಥಾನ ಅಭಿವೃದ್ಧಿಯಾಗದಿರುವುದೇ ಸಾಕ್ಷಿಯಾಗಿದೆ. ಪುರಾಣ ಪ್ರಸಿದ್ಧ ದೇವಸ್ಥಾನ ಇದುವರೆಗೂ ಕಾಯಕಲ್ಪ ಕಂಡಿಲ್ಲ. ಸಮುದಾಯದ ಜನರು ಸಂಘಟಿತರಾದರೆ ಮಾತ್ರ ಸೌಲಭ್ಯಗಳನ್ನು ಪಡೆದು, ಪ್ರಗತಿ ಸಾಧಿಸಲು ಸಾಧ್ಯ. ಹೀಗಾಗಿ, ಯುವಕರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.
ರಾಜಕೀಯ ಕಾರಣದಿಂದಾಗಿ ಸಮುದಾಯದ ಜನರಲ್ಲಿ ಒಗ್ಗಟ್ಟು ಮೂಡುತ್ತಿಲ್ಲ. ಈಗಿರುವ ತಾಲೂಕು ಉಪ್ಪಾರ ಸಂಘಕ್ಕೆ ಪುನರುಜ್ಜೀವನ ನೀಡುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಯುವಕರು ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೂ ಮುನ್ನ ಗಿರೀಶ್ ಅವರು ಉಪ್ಪಾರ ಸಮುದಾಯದವರು ವಾಸಿಸುವ ರಾಮನಾಥಪುರ ಹೋಬಳಿಯ ಗರುಡನಹಳ್ಳಿ, ರಾಮನಾಥಪುರ, ಕೇರಳಾಪುರ, ಕಾಳೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕುಂದುಕೊರತೆ ಆಲಿಸಿದರು.