ನ್ಯೂಸ್

ಜನರ ಸಮಸ್ಯೆ ಆಲಿಸಲು ಶಾಸಕರ ಕಚೇರಿ ಸ್ಥಾಪನೆ

ನಂಜನಗೂಡು: ಜನರ ಕುಂದುಕೊರತೆ ಆಲಿಸಲು ನಗರದ ತಾಲೂಕು ಪಂಚಾಯಿತಿ ಕಚೇರಿ ಕಟ್ಟಡದಲ್ಲಿ ಶಾಸಕರ ಕಚೇರಿ ತೆರೆಯಲಾಗಿದೆ ಎಂದು ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಗರದ ತಾಪಂ ಕಚೇರಿ ಆವರಣದಲ್ಲಿ ಸೋಮವಾರ ಶಾಸಕರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಜನರು ತಮ್ಮ ಅಹವಾಲು ಸಲ್ಲಿಸಲು ನನ್ನನ್ನು ಭೇಟಿಯಾಗಲು ಬರುತ್ತಾರೆ. ಹೀಗಾಗಿ ತಾಪಂ ಕಚೇರಿ ಕಟ್ಟಡದಲ್ಲಿ ನೂತನವಾಗಿ ಕಚೇರಿ ತೆರೆಯಲಾಗಿದೆ. ಜನರ ಅಹವಾಲು ಸ್ವೀಕರಿಸಲು ಸಿಬ್ಬಂದಿ ನೇಮಿಸಲಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಈ ಕಚೇರಿಯಲ್ಲಿ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಬಹುದು. ನಾನು ವಾರದಲ್ಲಿ ಎರಡು ದಿನ ಖುದ್ದು ಹಾಜರಿದ್ದು, ಜನರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೇರವಾಗಿ ಬರಲು ಸಾಧ್ಯವಾಗದವರಿಗೆ ಕಚೇರಿಯ ಸಹಾಯವಾಣಿ ಸಂಖ್ಯೆ ತೆರೆಯಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದರು.

ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಪರಿಹರಿಸಬೇಕೆಂಬ ದೃಷ್ಟಿಯಿಂದ ತಾಲೂಕಿನ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ತಾಲೂಕು ಮಟ್ಟದ ಅಧಿಕಾರಿಗಳ ಜತೆಗೂಡಿ ಜನಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಜನರು ದೂರು ನೀಡುತ್ತಿದ್ದಾರೆ. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ 19 ಕಿಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದ್ದು, ಈಗಾಗಲೇ ಈ ಬಗ್ಗೆ ಸದನದಲ್ಲಿ ಚರ್ಚಿಸಿ ಹೆಚ್ಚಿನ ಅನುದಾನ ಕೊಡುವಂತೆ ಕೋರಿದ್ದೇನೆ. ಶೀಘ್ರದಲ್ಲೇ ಅನುದಾನ ಬಿಡುಗಡೆಯಾಗಲಿದ್ದು, ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಕ್ರಮವಹಿಸುತ್ತೇನೆ ಎಂದು ಹೇಳಿದರು.

ನಗರದ ಚಾಮಲಾಪುರ ಬೀದಿಯಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರ ಸಮುದಾಯ ಭವನವನ್ನು ಶಾಸಕರು ಇದೇ ವೇಳೆ ಉದ್ಘಾಟಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠ ನಾಯಕ, ಜಿಪಂ ಮಾಜಿ ಸದಸ್ಯ ಕೆ.ಮಾರುತಿ, ದೊರೆಸ್ವಾಮಿ ನಾಯಕ, ಕರಳಾಪುರ ನಾಗರಾಜು, ಕಳಲೆರಾಜೇಶ್, ನಗರಸಭಾ ಸದಸ್ಯ ಶ್ರೀಕಂಠಸ್ವಾಮಿ, ಗಾಯಿತ್ರಿ, ಶ್ವೇತಲಕ್ಷ್ಮೀ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಧರ್, ಜಗದೀಶ್, ಗೋಪಾಲ್, ಶ್ರೀಕಂಠ, ಉಮೇಶ, ಗೋವಿಂದರಾಜು, ಮಾಯಪ್ಪ, ಉಮಾ ಮಹೇಶ್, ನಗರಸಭಾ ಮಾಜಿ ಸದಸ್ಯರಾದ ಚಂದ್ರು, ಮಂಜುನಾಥ್ ಹಲವರು ಉಪಸ್ಥಿತರಿದ್ದರು.