ಎಚ್.ಡಿ.ಕೋಟೆ: ತಾಲೂಕಿನ ಜನರು ಮತ್ತೊಮ್ಮೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡುವ ಮೂಲಕ ತಾಲೂಕಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ನಿಮ್ಮ ನಿರೀಕ್ಷೆ ಸುಳ್ಳು ಮಾಡದೆ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ನಾಯಕ ಸಮಾಜದ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಮ್ಮ ತಂದೆಯವರ ಹೋರಾಟ ಹಾಗೂ ದಿ.ಧ್ರುವನಾರಾಯಣ ಅವರ ಆಶೀರ್ವಾದ ನನಗೆ ಶಾಸಕನಾಗಿ ಆಯ್ಕೆ ಆಗಲು ಸಾಧ್ಯವಾಗಿದೆ. ನಾಯಕ ಸಮುದಾಯದವರು ಸ್ವಾಭಿಮಾನಿಗಳು. ತಾಳ್ಮೆಯಿಂದ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡವರು. ನಾವು ಆರ್ಥಿಕವಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಗ್ರಾಮದಲ್ಲಿ ಶಾಲೆ ಕಟ್ಟಿಸಿಕೊಡಿ ಎಂದು ಯಾರು ಕೇಳುವುದಿಲ್ಲ. ದೇವಸ್ಥಾನದ ನಿರ್ಮಾಣಕ್ಕೆ ಸಹಾಯ ಕೇಳುವವರೇ ಹೆಚ್ಚು. ಸಮುದಾಯ ನಮ್ಮ ಮಕ್ಕಳ ಉನ್ನತ ವ್ಯಾಸಂಗಕ್ಕೆ ಹೆಚ್ಚು ಒತ್ತು ಕೊಡಬೇಕು. ಈ ಸಮಾಜದಲ್ಲಿ ಹುಟ್ಟಿರುವುದು ಪುಣ್ಯದ ಕೆಲಸ. ನಮ್ಮ ಸಮಾಜವನ್ನು ನಾವು ಗುರುತಿಸಿ ಗೌರವಿಸದಿದ್ದರೆ ಬೇರೆ ಸಮಾಜ ಗುರುತಿಸಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.
ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡಲಾಯಿತು. ಸಮಾಜದ ಸ್ವಾಮೀಜಿ ಅವರು 280 ದಿನ ಪ್ರತಿಭಟನೆ ಮಾಡಿದರೂ ಗೌರವ ಸಿಗಲಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಮೀಸಲಾತಿ ಹೆಚ್ಚಳ ಮಾಡಲಾಗುತ್ತದೆ. ಮೀಸಲಾತಿ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ತಿಳಿಸಿದರು.
ಮುಖಂಡ ರಾಜನಾಯಕ ಮಾತನಾಡಿ, ಎರಡನೇ ಬಾರಿಗೆ ತಾಲೂಕಿನಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಾಲೂಕಿಗೆ ಇದ್ದ ಕಳಂಕವನ್ನು ತೊಡೆದು ಹಾಕಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಅಧಿಕಾರಕ್ಕೆ ಒಂದು ಪಕ್ಷ ಬಂದರೆ, ತಾಲೂಕಿನ ವಿರೋಧ ಪಕ್ಷದ ಶಾಸಕರು ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ಆ ಮಾತನ್ನು ಸುಳ್ಳು ಮಾಡಲಾಗಿದೆ ಎಂದರು.
ಎಂ.ಶಿವಣ್ಣ ಅವರು ಸಚಿವರಾಗಿದ್ದು, ಬಿಟ್ಟರೆ ತಾಲೂಕಿಗೆ ಸಚಿವ ಸ್ಥಾನ ಒಲಿದು ಬಂದಿರಲಿಲ್ಲ. 20 ವರ್ಷಗಳ ನಂತರ ಮತ್ತೆ ಸಚಿವ ಸ್ಥಾನ ಸಿಗುವ ಭರವಸೆ ಇದ್ದು, ಮುಂದೆ ಶಾಸಕ ಅನಿಲ್ ಚಿಕ್ಕಮಾದು ಅವರು ಸಚಿವರಾಗಿ ತಾಲೂಕಿನಲ್ಲಿ ಅಭಿವೃದ್ಧಿ ಪರ್ವ ಮಾಡಲಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭ ನಾಯಕ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಮುಖಂಡರಾದ ಚಿಕ್ಕವೀರನಾಯಕ, ಜಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ಶಂಭುಲಿಂಗನಾಯಕ, ಪುಟ್ಟಬಸವನಾಯಕ, ರಾಜು ಬಿದರಹಳ್ಳಿ, ಅಂಕನಾಯಕ, ಹನುಮೇಶ್ ಇದ್ದರು.