ಸಂವಿಧಾನ ಸಮಾನತೆ ಆಶಯವನ್ನು ಪ್ರಸ್ತಾಪಿಸಿದರೂ ಎಲ್ಲವನ್ನು ಅದರ ಮೂಲಕವೇ ಗಳಿಸಲು ಸಾಧ್ಯವಿಲ್ಲ. ಸಮಾಜದ ಜನರ ದೃಷ್ಟಿಕೋನ ಬದಲಾಗಬೇಕು ಎಂದು ಸಮತಾ ಅಧ್ಯಯನ ಕೇಂದ್ರ ಟ್ರಸ್ಟಿ ಎಚ್.ಎಂ.ಕಲಾಶ್ರೀ ಹೇಳಿದರು.
ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಸೋಮವಾರ ವಸಂತಮಹಲ್‌ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಮತ್ತು ಸಾಧಕಿಯರ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರೂ ಉತ್ತಮ ಕೆಲಸವನ್ನಷ್ಟೇ ಮಾಡುತ್ತೇವೆ ಎಂಬ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಆಗ ಮಹಿಳಾ ಸಮಾನತೆ ಸಾಧ್ಯ ಎಂದರು.
ಹೆಣ್ಣಿಲ್ಲದೆ ಗಂಡಿಲ್ಲ, ಗಂಡಿಲ್ಲದೆ ಹೆಣ್ಣಿಲ್ಲ ಎಂಬ ಅರಿವು ಇಬ್ಬರಿಗೂ ಇರಬೇಕು. ಒಬ್ಬರೇ ಎಲ್ಲವನ್ನು ನಿಭಾಯಿಸುತ್ತೇವೆ ಎಂಬ ಹಠವೂ ಬೇಡ. ಜತೆಯಾಗಿ ಸಾಗುವುದು, ಎಲ್ಲರನ್ನು ಒಳಗೊಳ್ಳುವ ಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಮಹಿಳೆಯರು ಎರಡನೇ ದರ್ಜೆ ಎಂಬ ಸ್ಥಿತಿಯನ್ನು ನಿವಾರಿಸಲು ಯುವಜನರು ಮುಂದಾಗಬೇಕು ಎಂದು ಹೇಳಿದರು.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜಿ.ಕೆ.ಪ್ರೇಮಾ ಮಾತನಾಡಿ, ಸಮುದಾಯದಲ್ಲಿ ಬೇರೂರಿರುವ ಅನಗತ್ಯ, ಅನಿಷ್ಟ ಪದ್ಧತಿಗಳು ಹೆಣ್ಣುಮಕ್ಕಳನ್ನು ಹೆಚ್ಚು ಶೋಷಿಸುತ್ತದೆ. ಇದನ್ನು ತೊಲಗಿಸಲು ಅಲ್ಲಿನ ಸಂಸ್ಕೃತಿಯ ಆಳವಾದ ಪರಿಚಯವನ್ನು ಹೊಂದಿ, ಚರ್ಚಿಸುವುದು ಅಗತ್ಯ. ಸಮುದಾಯದೊಳಗಿನ ಮಕ್ಕಳು ಸೂಕ್ತವಾದ ಶಿಕ್ಷಣ ಪಡೆದಾಗ ಈ ಕಾರ್ಯಕ್ಕೆ ವೇಗ ದೊರೆಯುತ್ತದೆ ಎಂದರು.
ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ಮಾತನಾಡಿ, ಸಮತಾ ಕೇಂದ್ರ ಸಮಾಜದಲ್ಲಿ ಮಹಿಳೆಯರ ಪರವಾದ ಧ್ವನಿಯನ್ನು ಬಲಗೊಳಿಸಲು ಕೆಲಸ ಮಾಡುತ್ತಿದೆ. ಲೇಖಕಿ ವಿಜಯಾದಬ್ಬೆ ಹೆಸರಿನಲ್ಲಿ ಕವಿತೆ, ಕಥಾ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಜನರಲ್ಲಿ ಲಿಂಗತ್ವ ಸೂಕ್ಷತೆ ಬೆಳೆಸಲು, ಸ್ತ್ರೀವಾದಿ ಚಿಂತನೆಗೆ ಬಲತುಂಬಲು ಪ್ರಯತ್ನಿಸುತ್ತಿದ್ದೇವೆ. ಸಾಧಕಿಯರನ್ನು ಗುರುತಿಸಿ ಪರಿಚಯಿಸುವುದು, ಅವರ ಜೀವನದಿಂದ ಪ್ರೇರಣೆ ಹೊಂದುವ ಕೆಲಸವಾಗಬೇಕು ಎಂದು ಹೇಳಿದರು.
ಸಮಾಜದಲ್ಲಿ ಲಿಂಗತ್ವ ರಾಜಕಾರಣದ ಇರುವಿಕೆಯನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದು ಯಾವ್ಯಾವ ನೆಲೆಯಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ಗುರುತಿಸುವುದು ಮಹಿಳಾ ಸಮಾನತೆಗೆ ಅಗತ್ಯ ಎಂದು ಹೇಳಿದರು.
ವಸ್ತುಸ್ಥಿತಿಯನ್ನು ಅರಿತವರು ಪ್ರಶ್ನಿಸುವುದಕ್ಕೆ ಆರಂಭಿಸುತ್ತಾರೆ. ತಾರತಮ್ಯದ ವಿರುದ್ಧ ಹುಟ್ಟುವ ಒಂದು ಪ್ರಶ್ನೆ ಅನೇಕ ಪ್ರಶ್ನೆಗಳಿಗೆ ದಾರಿಯಾಗುತ್ತದೆ. ಅಸಮಾನತೆ ನಿವಾರಣೆಗೆ ವೇದಿಕೆ ಕಲ್ಪಿಸುತ್ತದೆ ಎಂದರು. ವಸಂತಮಹಲ್ ಪ್ರಾಂಶುಪಾಲರಾದ ಎಚ್.ಎನ್.ಗೀತಾಂಬ, ಮೋಳಿ ವರ್ಗೀಸ್, ಅಮಿತ್ ಇದ್ದರು.