ನ್ಯೂಸ್

ಜನರ ಆರ್ಥಿಕ ಸುಧಾರಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂದು

ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಗುರುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ. ಅಶೋಕ್ ಉದ್ಘಾಟಿಸಿದರು. ಎಸ್.ಎನ್.ಟಿ. ಸೋಮಶೇಖರ್, ರಾಜ್‌ಕುಮಾರ್, ಅಶ್ವತ್ಥಕುಮಾರೇಗೌಡ, ಶಿವಶಂಕರ್ ಇತರರು ಇದ್ದರು.

ಪಾಂಡವಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸುಧಾರಣೆಯಲ್ಲಿ ಸರ್ಕಾರಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಹೇಳಿದರು.\


ತಾಲೂಕಿನ ಜಕ್ಕನಹಳ್ಳಿಯ ನಾ.ಚ. ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಹಾಗೂ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೋಗಲಾಡಿಸಲು ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಒಂದು ಕುಟುಂಬದ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹಣಕಾಸಿನ ವಿಚಾರದಲ್ಲಿ ಒಬ್ಬರಿಗೊಬ್ಬರು ಜಾಮೀನು ನೀಡಲು ಹಿಂದೇಟು ಹಾಕುತ್ತಾರೆ. ಆದರೆ ಪೂಜ್ಯರು ಬ್ಯಾಂಕಿನಲ್ಲಿ ನೂರಾರು ಕೋಟಿ ರೂ.ಗಳ ಸಾಲಕ್ಕೆ ಜಾಮೀನು ನೀಡಿ ಆ ಹಣವನ್ನು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೂಲಕ ವಿತರಿಸಿ ಬಡ ಜನರ ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.


ಸಂಸ್ಥೆಯ ಮೇಲುಕೋಟೆ ಯೋಜನಾಧಿಕಾರಿ ಸರೋಜಾ ಮಾತನಾಡಿ, ತಾಲೂಕಿನಲ್ಲಿ 1,203 ಸ್ವಸಹಾಯ ಸಂಘಗಳಿದ್ದು, 17,419 ಸದಸ್ಯರಿದ್ದಾರೆ. ಸದಸ್ಯರು 10 ರೂ.ನಂತೆ ಪಾವತಿಸಿರುವ ಉಳಿತಾಯ ಹಣ 1.70 ಕೋಟಿ ರೂ. ಸಂಗ್ರಹವಾಗಿದೆ. ಈವರೆಗೂ 41.66 ಕೋಟಿ ರೂ. ಪ್ರಗತಿನಿಧಿ ವಿತರಣೆ ಮಾಡಲಾಗಿದ್ದು, 12,924 ಸದಸ್ಯರು ಆರೋಗ್ಯ ರಕ್ಷಾ ವಿಮಾ ಯೋಜನೆಗೆ ನೋಂದಾಯಿತರಾಗಿದ್ದಾರೆ. ಪ್ರಗತಿ ರಕ್ಷಣಾ ಸೌಲಭ್ಯದಡಿ 336 ಸದಸ್ಯರು 2.27 ಕೋಟಿ ರೂ. ಪಡೆದುಕೊಂಡಿದ್ದಾರೆ. ನಿರ್ಗತಿಕರಿಗೆ ಪ್ರತಿ ತಿಂಗಳು 37,500 ರೂ. ಮಾಸಾಶನ ಪಾವತಿಸಲಾಗುತ್ತಿದೆ. ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಒಂದು ಕೆರೆ ಅಭಿವೃದ್ಧಿಪಡಿಸಲಾಗಿದೆ. ಜನಮಂಗಲ ಕಾರ್ಯಕ್ರಮದಡಿಯಲ್ಲಿ ಅಂಗವಿಕಲರಿಗೆ ಸಲಕರಣೆ ವಿತರಿಸಲಾಗಿದೆ ಎಂದು ತಿಳಿಸಿದರು.


ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಮುರುಳೀಧರ್ ಮಾತನಾಡಿದರು. ಸಂಸ್ಥೆಯ ಪದಾಧಿಕಾರಿಗಳಾದ ಎಸ್.ಎನ್.ಟಿ. ಸೋಮಶೇಖರ್, ರಾಜ್‌ಕುಮಾರ್, ಅಶ್ವತ್ಥಕುಮಾರೇಗೌಡ, ಶಿವಶಂಕರ್, ಕೋ.ಪು. ಗುಣಶೇಖರ್, ದನಂಜಯ, ಗ್ರಾಪಂ ಅಧ್ಯಕ್ಷೆ ನಿಂಗಮ್ಮ, ಸದಸ್ಯರಾದ ಲೋಕೇಶ್, ಕುಮಾರ್ ಇತರರು ಇದ್ದರು.