ನ್ಯೂಸ್

ಜನರ ಆಕ್ರೋಶದ ನಡುವೆಯೇ ಮಾಸ್ಕ್ ಧರಿಸದವರಿಂದ ಲಕ್ಷಾಂತರ ರೂ. ದಂಡ ವಸೂಲಿ..!

ಬೆಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ ಮತ್ತು ವ್ಯಕ್ತಿಗತ ಅಂತರ ಕಾಯ್ದುಕೊಳ್ಳದವರಿಗೆ ವಿಧಿಸುತ್ತಿದ್ದ ದುಬಾರಿ ದಂಡದ ವಿರುದ್ಧ ಸ್ಫೋಟಗೊಂಡಿದ್ದ ಜನಾಕ್ರೋಶವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಣ್ಣಗಾಗಿಸಿದ್ದಾರೆ. ಈ ನಡುವೆಯೂ ಪೊಲೀಸರು ಒಂದೇ ದಿನದಲ್ಲಿ 800ಕ್ಕೂ ಅಧಿಕ ಮಂದಿಗೆ ದಂಡ ವಿಧಿಸಿದ್ದಾರೆ.

ಬುಧವಾರ ಬೆಳಗ್ಗೆಯಿಂದಲೇ ಬಿಬಿಎಂಪಿ ಮಾರ್ಷಲ್‌ಗಳು ಮತ್ತು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು, ಮಾರುಕಟ್ಟೆ ಪ್ರದೇಶಗಳು ಸೇರಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ ಮತ್ತು ವ್ಯಕ್ತಿಗತ ಅಂತರ ಕಾಯ್ದುಕೊಳ್ಳದವರಿಂದ ದಂಡ ವಸೂಲಿ ಮಾಡುತ್ತಿದ್ದರು.

ಮಧ್ಯಾಹ್ನದ ವೇಳೆಗೆ ದಂಡ ಪ್ರಮಾಣ ಇಳಿಕೆ ಮಾಡಿದ ಯಡಿಯೂರಪ್ಪ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದರು. ಈ ಪ್ರಕಾರ ನಗರ ಪ್ರದೇಶದಲ್ಲಿ 1 ಸಾವಿರ ರೂ. ಇದ್ದ ದಂಡವನ್ನು 250 ರೂ.ಗೆ ಮತ್ತು ಗ್ರಾಮೀಣ ಭಾಗದಲ್ಲಿದ್ದ ದಂಡವನ್ನು 100 ರೂ.ಗೆ ಇಳಿಕೆ ಮಾಡಿದರು. ಇದರಿಂದ ಜನರು ನಿಟ್ಟುಸಿರು ಬಿಡುವಂತಾಯಿತು.

ಕೋವಿಡ್ ಮಾರ್ಗಸೂಚಿ ಪಾಲನೆ ಮಾಡದೆ ಇರುವವರಿಗೆ ದಂಡ ವಿಧಿಸಲು ಬಿಬಿಎಂಪಿ ಕಡೆಯಿಂದ ಪೊಲೀಸರಿಗೆ 110 ಡಿವೈಸರ್ ನೀಡಿದ್ದಾರೆ. ಬುಧವಾರದಿಂದ ದಂಡ ವಸೂಲಿ ಮಾಡಲು ಆದೇಶ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು. ಜತೆಗೆ, ಶುಕ್ರವಾರದಿಂದ ಸ್ಥಳೀಯ ಸಂಘ- ಸಂಸ್ಥೆಗಳು, ಸ್ವಯಂಸೇವ ಸಂಘಗಳ ಜತೆ ಸೇರಿ ಜನಜಾಗೃತಿ ಮೂಡಿಸುವಂತೆ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಸದಾ ಮಾಸ್ಕ್ ಧರಿಸಲು ಸಾಧ್ಯವೇ?

ಸಣ್ಣ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಮನೆಯಿಂದ ಹೆಚ್ಚು ಕಾಲ ಹೊರಗಡೆಯೇ ಇರುತ್ತಾರೆ. ಸದಾಕಾಲ ಮಾಸ್ಕ್ ಧರಿಸಿಕೊಂಡು ವ್ಯಕ್ತಿಗತ ಅಂತರ ಕಾಯ್ದುಕೊಂಡು ಇರಲು ಸಾಧ್ಯವೇ ಎಂಬ ಪ್ರಶ್ನೆಗಳು ಕೇಳಿಬಂದಿವೆ. ಈ ಎಲ್ಲ ಗೊಂದಲಗಳಿಗೆ ಬಗೆಹರಿಯಬೇಕಾದರೆ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮಾಸ್ಕ್ ಧರಿಸಬೇಕು ಎಂಬುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.

ವಸೂಲಿಗೆ ದಾರಿ ಆಗಬಾರದು

ಮಾಸ್ಕ್ ಮತ್ತು ವ್ಯಕ್ತಿಗತ ಅಂತರ ಪಾಲನೆ ಮಾಡದೆ ಇರುವರಿಂದ ದಂಡ ವಸೂಲಿ ಮಾಡಲು ಮಾರ್ಷಲ್ ಮತ್ತು ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಇದೇ ನೆಪದಲ್ಲಿ ತಪ್ಪು ಮಾಡಿದವರಿಗೆ ಬೆದರಿಸಿ ದಂಡದ ಬದಲು ಲಂಚ ವಸೂಲಿಗೆ ಇಳಿಯಬಾರದು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪೊಲೀಸರು ಎಲ್ಲಿ ಎಷ್ಟು ಕೇಸ್ ದಾಖಲು

ಉತ್ತರ ವಿಭಾಗ 140

ಪಶ್ಚಿಮ ವಿಭಾಗ 126

ಆಗ್ನೇಯಾ ವಿಭಾಗ 88

ಕೇಂದ್ರ ವಿಭಾಗ 305

ದಕ್ಷಿಣ ವಿಭಾಗ 135