ಸರಗೂರು:ಜೆಡಿಎಸ್ ಪಕ್ಷ ಈ ಹಿಂದೆ ಜಾರಿಗೆ ತಂದಿದ್ದ ಶೂನ್ಯ ಬಡ್ಡಿದರ ಸಾಲ, ಬಡವರ ಬಂಧು ಯೋಜನೆಗಳು ಬಡವರಿಗೆ ಆಸರೆಯಾಗಿತ್ತು. ಈಗ ಮತ್ತೆ ಅಂತಹುದೇ ಜನಪರ ಯೋಜನೆಗಳು ಜಾರಿಗೊಳಿಸಲು ನೀವುಗಳು ನನ್ನನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಆಗಲು ಅವಕಾಶ ನೀಡಬೇಕೆಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಮತದಾರರಲ್ಲಿ ಮನವಿ ಮಾಡಿದರು.
ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಸರಗೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಬಡಗಲಪುರ, ಹಾದನೂರು, ಯಶವಂತಪುರ ಎತ್ತಿಗೆ ಅಳಲಹಳ್ಳಿ, ಚನ್ನಗುಂಡಿ, ಮುತ್ತಿಗೆ ಹುಂಡಿ, ಜಯಲಕ್ಷ್ಮೀಪುರ, ಶಿವಪುರ, ಮೂತಲನಮೂಲೆ, ಕಾನಕಹಳ್ಳಿ, ಕಾಡಗೆರೆ, ದೊಡ್ಡಬರಗಿ, ಚಿಕ್ಕಬರಗಿ, ಹಾಡಿಗಳಿಗೂ ಹೆಗ್ಗನೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಶುಕ್ರವಾರ ಭೇಟಿ ನೀಡಿ ರೈತರಿಗೆ ಕಷ್ಟಕಾರ್ಪಣ್ಯಗಳನ್ನು ಆಲಿಸುವುದರ ಜತೆಗೆ ಪಕ್ಷದ ಪ್ರಮುಖ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳಿಸಿ ಎತ್ತಿನಗಾಡಿಯ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡಿದ್ದರು. ಬಡಕುಟುಂಬಗಳಿಗೆ ಜೀವನ ನಿರ್ವಣೆಗೆ ಇದರಿಂದ ಬಹಳ ಅನುಕೂಲವಾಗಿತ್ತು. ಹಾಗಾಗಿ, ಶ್ರಮಿಕರು, ಕಾರ್ಮಿಕರು, ರೈತರ ಕಲ್ಯಾಣಕ್ಕೆ ಶ್ರಮಿಸಿರುವ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಆರಿಸಬೇಕು ಎಂದು ಮನವಿ ಮಾಡಿದರು.
ಜಯಪ್ರಕಾಶ್ ಗ್ರಾಮದಲ್ಲಿ ಪ್ರವೇಶಿಸುತ್ತಿದ್ದಂತೆ ಸ್ಥಳೀಯ ಮುಖಂಡರು ಹಾಗೂ ಯುವಕರು ಪಟಾಕಿ ಸಿಡಿಸಿ ಭರ್ಜರಿ ಸ್ವಾಗತ ಕೋರಿದರು. ನಮ್ಮ ತಂದೆ ಚಿಕ್ಕಣ್ಣ ಶಾಸಕರಾಗಿದ್ದ ಅವಧಿಯಲ್ಲಿ ಮುಳ್ಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಾದನೂರು ತಾಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ಕಾರ್ಯ ಮಾಡಿದ್ದರು. ಹೀಗಾಗಿ ಅವರ ಮಗನಾದ ನನ್ನನ್ನು ಗೆಲ್ಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ನೀಡುವಂತೆ ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ್ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ರಾಜೇಂದ್ರ, ನರಸಿಂಹೇಗೌಡ, ಪಪಂ ಎಸ್.ಎಲ್.ರಾಜಣ್ಣ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ, ಹಾದನೂರು, ಗ್ರಾಪಂ ಸದಸ್ಯರಾದ ರಾಜೇಶ್, ಶಿವಕುಮಾರ್, ಜಿಪಂ ಸದಸ್ಯ ಎಂ.ಪಿ.ನಾಗರಾಜು, ಮಾಜಿ ಗ್ರಾಪಂ ಉಪಾಧ್ಯಕ್ಷ ಶಿವರಾಜು, ಜಯಲಕ್ಷ್ಮೀಪುರ ರಾಜು, ನಾಗೇಂದ್ರ, ಅಶೋಕ್, ಜಯಶಂಕರಗೌಡ ಇತರರಿದ್ದರು.