ಬಾಳೆಹೊನ್ನೂರು: ಎಲ್ಲ ಕಲೆಗಳಿಗಿಂತ ಸಮಾಜದಲ್ಲಿ ಜನಪದ ಕಲೆಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ರೋಟರಿ ಜಿಲ್ಲಾ ನಿಕಟಪೂರ್ವ ಗರ್ವನರ್ ಬಿ.ಸಿ.ಗೀತಾ ಹೇಳಿದರು.
ಪಟ್ಟಣದ ಬಾಳೆಹೊನ್ನೂರು ವಿದ್ಯಾಸಂಸ್ಥೆ ಸಭಾಂಗಣದಲ್ಲಿ ದಿವ್ಯಭಾರತಿ ಮಹಿಳಾ ಮಂಡಳಿ ತಾಯಿ-ಮಕ್ಕಳಿಗಾಗಿ ಭಾನುವಾರ ಆಯೋಜಿಸಿದ್ದ ಜನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಪದ ನಮ್ಮ ಬದುಕಿನ ಜೀವನಾಡಿಯಾಗಿದೆ. ಜನಪದದಲ್ಲಿ ಗ್ರಾಮೀಣ ಜನರ ಜೀವನಶೈಲಿ ಅಡಗಿದೆ. ಜನಪದ ಕಲೆಯಲ್ಲಿ ನಮ್ಮ ನಿತ್ಯದ ಜೀವನದ ಆಗುಹೋಗುಗಳನ್ನು ಅರ್ಥಪೂರ್ಣವಾಗಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು, ತಾಯಂದಿರಿಗೆ ಜನಪದ ಮಹತ್ವ ಸಾರಬೇಕೆಂಬ ಉದ್ದೇಶದಿಂದ ದಿವ್ಯಭಾರತಿ ಮಹಿಳಾ ಮಂಡಳಿಯು ಜನಪದ ಸ್ಪರ್ಧೆಯನ್ನು ಆಯೋಜಿಸಿರುವುದು ಶ್ಲಾಘನೀಯ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಎನ್.ಆರ್.ಪುರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಮಾತನಾಡಿ, ಮಕ್ಕಳ ಪ್ರತಿಭೆ ಹೊರಹೊಮ್ಮಲು ಇಂತಹ ವೇದಿಕೆ ಪೂರಕ. ಜನಪದ ಎಂಬುದು ಒಂದು ವಿಶೇಷ ಕಲೆ. ಮಕ್ಕಳಿಗೆ ಜನಪದದ ಕುರಿತು ಅರಿವು ಮೂಡಿಸಬೇಕಿದೆ. ಜನಪದದಲ್ಲಿ 252 ಪ್ರಕಾರಗಳಿದ್ದು ಅಡುಗೆ, ರಂಗೋಲಿ, ಹೂತೋಟ ಬೆಳೆಸುವುದು, ಕೃಷಿ ಸೇರಿದಂತೆ ವಿವಿಧ ಕಲೆಗಳು ಜನಪದಲ್ಲಿ ಅಡಗಿವೆ. ಜನಪದ ಹಾಡುಗಳಲ್ಲಿ ವಿಶೇಷ ಸಂದೇಶಗಳು ಸಮಾಜಕ್ಕೆ ರವಾನೆಯಾಗುತ್ತದೆ ಎಂದು ಹೇಳಿದರು.
ದಿವ್ಯಭಾರತಿ ಮಹಿಳಾ ಮಂಡಳಿ ಅಧ್ಯಕ್ಷೆ ಜ್ಯೋತಿ ಮೂರ್ತಿ, ಕಾರ್ಯದರ್ಶಿ ವಿದ್ಯಾ ಪೈ, ಖಜಾಂಚಿ ಸವಿತಾ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಜಾಹ್ನವಿ ಮತ್ತಿತರರಿದ್ದರು.