ಶಿವಮೊಗ್ಗ: ಜನನ ಮತ್ತು ಮರಣ ಪತ್ರ ಕೊಡುವ ಅಧಿಕಾರವನ್ನು ಉಪವಿಭಾಗಾಧಿಕಾರಿಗಳಿಗೆ ನೀಡಿರುವ ಕ್ರಮ ವಿರೋಧಿಸಿ ಗುರುವಾರ ಶಿವಮೊಗ್ಗ ವಕೀಲರ ಸಂಘದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜನನ ಮತ್ತು ಮರಣ ನೋಂದಣಿ ವಿಳಂಬದ ಸಂದರ್ಭ ಮತ್ತು ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಜನರು ಜೆಎಂಎಸ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ನ್ಯಾಯಾಲಯದ ಆದೇಶದ ನಂತರ ಸಂಬಂಧಪಟ್ಟ ಪ್ರಾಧಿಕಾರಗಳು ಈ ಜನನ ಮತ್ತು ಮರಣ ಪತ್ರ ನೀಡುತ್ತಿದ್ದವು. ಆದರೆ, ಇದೀಗ ಜೆಎಂಎಫ್‌ಸಿ ನ್ಯಾಯಾಲಯದ ಅಧಿಕಾರ ತೆಗೆದು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ನೀಡಲಾಗಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಮಧ್ಯವರ್ತಿಗಳು ಹುಟ್ಟಿಕೊಂಡು ಕಕ್ಷಿದಾರರು ಎಸಿ ಕಚೇರಿಗೆ ಅಲೆದಾಡಬೇಕಾಗುತ್ತದೆ. ಕೆಲಸದ ಒತ್ತಡದ ಸಂದರ್ಭದಲ್ಲಿ ಎಸಿ ನ್ಯಾಯಾಲಯದ ಆದೇಶಗಳು ವಿಳಂಬವಾಗುತ್ತದೆ ಎಂದು ದೂರಿದರು.
ಈ ಎಲ್ಲ ಸಮಸ್ಯೆಗಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜನನ, ಮರಣ ಪತ್ರಗಳಿಗೆ ಸಂಬಂಧಿಸಿದಂತೆ ಎಸಿ ನ್ಯಾಯಾಲಯಕ್ಕೆ ನೀಡಿರುವ ಅಧಿಕಾರವನ್ನು ಹಿಂಪಡೆದು ಈ ಹಿಂದಿನಂತೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮುಂದುವರಿಸುವಂತೆ ವಕೀಲರ ಸಂಘ ಮನವಿ ಮಾಡಿತು.
ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಉಪಾಧ್ಯಕ್ಷೆ ವಿದ್ಯಾರಾಣಿ, ಪ್ರಧಾನ ಕಾರ್ಯದರ್ಶಿ ಕೆ.ಅಣ್ಣಪ್ಪ, ಖಜಾಂಚಿ ಗಿರೀಶ್ ಎಸ್.ಜಾಧವ್, ಪದಾಧಿಕಾರಿಗಳಾದ ಟಿ.ಎಸ್. ಟೀಕೋಜಿರಾವ್, ಮಂಜುನಾಥ, ಜಿ.ಅಶೋಕ್, ಚಂದ್ರಕುಮಾರ್, ಮಹೇಂದ್ರಕುಮಾರ್ ಮತ್ತಿತರರಿದ್ದರು.