ಶೃಂಗೇರಿ: ಜಗದ್ಗುರುಗಳ ಬಳಿ ಸೇವೆ ಮಾಡುವ ಅವಕಾಶ ನನಗೆ ದೊರಕಿದ್ದು ಕ್ಷೇತ್ರದ ವಿಪ್ರ ಸಮಾಜ ಬಾಂಧವರು ನೀಡುತ್ತಿರುವ ಈ ಗೌರವ ಜಗದ್ಗುರುಗಳ ಪಾದಾರವಿಂದಕ್ಕೆ ಸಮರ್ಪಿಸುವೆ ಎಂದು ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ ಆಪ್ತ ಸಹಾಯಕ ಶಂ.ನ.ಕೃಷ್ಣಮೂರ್ತಿ ಭಟ್ ಹೇಳಿದರು.
ವಿದ್ಯಾಭಾರತಿ ಭವನದಲ್ಲಿ ಭಾನುವಾರ ಕ್ಷೇತ್ರ ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜಕ್ಕೆ ಕೈಲಾದ ಸಹಾಯವನ್ನು ನಿರಂತರವಾಗಿ ಮಾಡುತ್ತ ಬಂದಿದ್ದು ಜಗದ್ಗುರುಗಳು ಮತ್ತು ಭಕ್ತಾದಿಗಳ ಮಧ್ಯೆ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಜಗದ್ಗುರುಗಳ ಬಳಿ ಕೆಲಸ ಮಾಡುವುದೇ ಶ್ರೇಷ್ಠ. ಜಗದ್ಗುರುಗಳು ದೇವತಾ ಸ್ವರೂಪಿಗಳಾಗಿದ್ದು ಭಕ್ತಾದಿಗಳು ಕಷ್ಟ, ಸುಖಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಆಶೀರ್ವಾದ ಪಡೆಯಲು ಆಗಮಿಸುತ್ತಾರೆ. ಎಲ್ಲ ವಿಷಯವನ್ನು ಜಗದ್ಗುರುಗಳ ಬಳಿ ತಿಳಿಸಲು ಸಮಯವಿಲ್ಲದೆ ಇರುವುದರಿಂದ ಸಂಕ್ಷಿಪ್ತವಾಗಿ ಗುರುಗಳಿಗೆ ತಿಳಿಸುವ ಕೆಲಸ ನಾನು ಮಾಡುತ್ತಿದ್ದೇನೆ ಎಂದರು.
ಕರ್ಣಾಟಕ ಬ್ಯಾಂಕ್ ನಿವೃತ್ತ ಮಹಾ ಪ್ರಬಂಧಕ ಮಹಾಬಲೇಶ್ವರ್ ಮಾತನಾಡಿ, ಜಗದ್ಗುರುಗಳ ಆಶೀರ್ವಾದದಿಂದ ದೇಶ ಹಾಗೂ ಹೊರ ದೇಶದಲ್ಲೂ ಕರ್ಣಾಟಕ ಬ್ಯಾಂಕ್ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಪ್ರತಿವರ್ಷ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದೇನೆ. ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಶ್ರೀಗಳು ವಿಚಾರಿಸಿ ಆಶೀರ್ವದಿಸಿದ್ದಾರೆ. ಜಗದ್ಗುರುಗಳ ಬಳಿ ತೆರಳುವ ಸಂದರ್ಭದಲ್ಲಿ ಅವರ ಆಪ್ತ ಸಹಾಯಕರು ಶ್ರೀಗಳ ಭೇಟಿ ಮಾಡಿಸುತ್ತಿದ್ದರು ಎಂದರು.
ಪತ್ರಕರ್ತ ಪ್ರಭಾಕರ ಕಾರಂತ ಮಾತನಾಡಿ, ಜಗದ್ಗುರುಗಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಶಂ.ನ.ಕೃಷ್ಣಮೂರ್ತಿಗಳ ಸೇವೆ ಅನನ್ಯವಾಗಿದೆ ಎಂದರು.
ಶಂ.ನ.ಕೃಷ್ಣಮೂರ್ತಿ ಭಟ್ ಅವರನ್ನು ವಿವಿಧ ಬ್ರಾಹ್ಮಣ ಸಂಘಟನೆಗಳಿಂದ ಅಭಿನಂದಿಸಲಾಯಿತು. ಲಕ್ಷ ಗಾಯತ್ರಿ ಹೋಮದ ಪೂರ್ಣಾಹುತಿ ನಡೆಯಿತು. ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್, ಮುಖಂಡರಾದ ಕೆ.ಎಸ್.ಚಂದ್ರಶೇಖರರಾವ್, ಕೆಸರಿಕೊಡಿಗೆ ಕೃಷ್ಣಮೂರ್ತಿ, ಗಣೇಶ ಕನೋಡಿ, ಮಹಾಬಲಭೀಡೆ, ಬಿ.ಎಸ್.ಸುಧೀಂದ್ರ, ಮಹಿಳಾ ಘಟಕದ ಕವನಾ ಶ್ಯಾಮಸುಂದರ್, ಬಿ.ಎಲ್.ರವಿಕುಮಾರ್, ಎಂ.ಎಲ್.ಪ್ರಕಾಶ್ ಇದ್ದರು.