ನ್ಯೂಸ್

ಜಗತ್ತಿಗೆ ಶಾಂತಿ ಸಂದೇಶ ನೀಡಿದ ಮಹಮದ್ ಪೈಗಂಬರ್

ಮೂಡಿಗೆರೆ: ಪಟ್ಟಣದ ಬದ್ರಿಯ್ಯೀನ್ ಜುಮ್ಮಾ ಮಸೀದಿ, ಜಾಮಿಯಾ ಜುಮ್ಮಾ ಮಸೀದಿ ಮತ್ತು ಜದೀದ್ ಜುಮ್ಮಾ ಮಸೀದಿಗಳಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1500 ವರ್ಷದ ಜನ್ಮದಿನವನ್ನು ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು.

ಮಸೀದಿಗಳಲ್ಲಿ ಧಾರ್ಮಿಕ ಪಠಣ ಮತ್ತು ಮದರಸಾ ವಿದ್ಯಾರ್ಥಿಗಳಿಂದ ಮಿಲಾದ್ ಕಾರ್ಯಕ್ರಮ ನಡೆಯಿತು. ಬದ್ರಿಯ್ಯೀನ್ ಜುಮ್ಮಾ ಮಸೀದಿಯಲ್ಲಿ ಮೂರು ದಿನ ಧಾರ್ಮಿಕ ಪ್ರವಚನ, ರಕ್ತದಾನ ಶಿಬಿರ, ಮದರಸಾ ವಿದ್ಯಾರ್ಥಿಗಳಿಂದ ಮಿಲಾದ್ ಕುರಿತ ಧಾರ್ಮಿಕತೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶನಿವಾರ ಮಸೀದಿ ಖತೀಬ್ ಮುಸ್ತಫಾ ಯಮಾನಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಜಗತ್ತಿಗೆ ಶಾಂತಿ ಸಂದೇಶ ಸಾರುವ ಜತೆಗೆ ಹಸಿವಿನಿಂದ ಬಳಲುವವರಿಗೆ ಮೊದಲು ಅನ್ನ ನೀಡಬೇಕು ಎಂದು ತಿಳಿಸಿದ್ದಾರೆ. ಅವರ ಆಶಯದಂತೆ ಮುಸ್ಲಿಂ ಸಮಾಜ ಪ್ರಾಮಾಣಿಕತೆಯಿಂದ ಶಾಂತಿ, ಸಹಬಾಳ್ವೆ, ಸೌಹಾರ್ದಯುತವಾಗಿ ಸರ್ವರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿದೆ ಎಂದು ತಿಳಿಸಿದರು.

ಮಸೀದಿ ಅಧ್ಯಕ್ಷ ಎ.ಎಂ.ಶರೀಫ್ ಹಾಜಿ, ಗೌರವಾಧ್ಯಕ್ಷ ಸಿ.ಕೆ.ಇಬ್ರಾಹಿಂ ಹಾಜಿ, ಎಂ.ಎಸ್.ಇಬ್ರಾಹಿಂ ಹಾಜಿ, ಎಂ.ಎಚ್.ಇಸ್ಮಾಯಿಲ್, ಇಬ್ರಾಹಿಂ ಯಾದ್‌ಗಾರ್, ನಾಸಿರ್, ಸಂಶುದ್ದೀನ್ ಯಮಾನಿ, ಯಾಕೂಬ್ ಫೈಝಿ, ಹಸೈನಾರ್ ಮುಸ್ಲಿಯಾರ್ ಇತರರಿದ್ದರು.