ಸರಗೂರು : ಪಟ್ಟಣದಲ್ಲಿ ಹನುಮ ಜಯಂತಿ ಆಚರಣಾ ಸಮಿತಿಯಿಂದ ಜ.7ರಂದು ಆಯೋಜಿಸಿರುವ ಹನುಮ ಜಯಂತಿಯ 5ನೇ ವರ್ಷದ ಶೋಭಾಯಾತ್ರೆಯನ್ನು ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆಯೊಂದಿಗೆ ಶಾಂತಿಯುತವಾಗಿ ನಡೆಸಲು ತೀರ್ಮಾನಿಸಲಾಯಿತು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ನೂತನ ಪೊಲೀಸ್ ವೃತ್ತ ನಿರೀಕ್ಷಕ ಎಂ.ಲಕ್ಷ್ಮೀಕಾಂತ ನೇತೃತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಮಿತಿ ಪದಾಧಿಕಾರಿಗಳು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಂತಿಯುತವಾಗಿ ಹನುಮ ಜಯಂತಿ ಆಚರಿಸಲು ನಿರ್ಧರಿಸಿದರು.
ಸಭೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಎಂ.ಲಕ್ಷ್ಮೀಕಾಂತ ಮಾತನಾಡಿ, ತಾಲೂಕು ಕೇಂದ್ರ ಸರಗೂರು ಪಟ್ಟಣದಲ್ಲಿ ಹನುಮ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಶೋಭಾಯಾತ್ರೆ ಮೆರವಣಿಗೆ ಹೊರಡುವ ಸ್ಥಳಗಳಲ್ಲಿ ಸಮಿತಿ ಪದಾಧಿಕಾರಿಗಳು ಜಾಗರೂಕತೆಯಿಂದ ಇರಬೇಕು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಹೊರಡುವಾಗ ಕಲಾ ತಂಡಗಳ ನಡುವೆ ಅಂತರ ಕಾಪಾಡಬೇಕು. ಮೆರವಣಿಗೆ ಸಂದರ್ಭದಲ್ಲಿ ಜೋರಾಗಿ ಶಬ್ಧ ಮಾಡುವುದು. ಚೀರಾಟ ಮಾಡಬಾರದು ಎಂದು ತಿಳಿಸಿದರು.
ಮೆರವಣಿಗೆಯು ಮುಖ್ಯರಸ್ತೆಯ ಮೂಲಕವೇ ಹಾದು ಹೋಗುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮಜ್ಜಿಗೆ, ಪಾನಕ ವಿತರಣೆ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಂತು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಕಲಾ ತಂಡಗಳು ಕಲಾ ಪ್ರದರ್ಶನ ನೀಡುವಾಗ ಮಕ್ಕಳು, ಮಹಿಳೆಯರನ್ನು ದೂರವಿರುವಂತೆ ನಿಗಾ ವಹಿಸಬೇಕು. ಆ ಮೂಲಕ ಒಗ್ಗಟ್ಟಿನಿಂದ ಶಾಂತಿಯುತವಾಗಿ ಹನುಮ ಜಯಂತಿ ಆಚರಿಸಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ಶ್ರವಣದಾಸ ರೆಡ್ಡಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಶಾಂತಿಯುತವಾಗಿ ಹನುಮ ಜಯಂತಿ ಆಚರಣೆ ಮಾಡಬೇಕು. ಸಮಿತಿ ಪದಾಧಿಕಾರಿಗಳು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮಿತಿ ಅಧ್ಯಕ್ಷ ಚನ್ನಪ್ಪ, ಉಪಾಧ್ಯಕ್ಷ ವಿನಯ್, ಪ.ಪಂ. ಸದಸ್ಯರಾದ ನೂರಾಳಸ್ವಾಮಿ, ನವೀನ್, ಸ್ವಾಮಿ, ಸಮಿತಿಯ ಪದಾಧಿಕಾರಿಗಳಾದ ರಾಮು, ಅಭಿ, ಅನಿಲ್ ಕುಮಾರ್, ರವಿ, ನವೀನ್, ಶ್ರೀನಾಥ್, ಸ್ವಾಮಿ, ಸಾಗರೆ ಶಿವಪ್ಪ, ಆನಂದ್ ಮೈಲಾರಿ, ರಮೇಶ್, ಜಲೀಲ್, ಸೂಹೆಲ್, ನಾಸೀರ್, ಪೈಂಟ್ ನಾಗರಾಜು, ರಾಜೇಶ್ ಪೊಲೀಸ್ ಸಿಬ್ಬಂದಿ ಶಿವಕುಮಾರ್, ಇಮ್ರಾನ್ ಅಹಮದ್, ಪುರುಷೋತ್ತಮ್, ರಾಜು, ಆನಂದ್ ಸೇರಿದಂತೆ ಇತರರು ಇದ್ದರು.