ಸರಗೂರು: ವಿದ್ಯಾರ್ಥಿಗಳು, ಜೀವನದಲ್ಲಿ ಗುರಿ ಮತ್ತು ಛಲ ರೂಢಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಉದ್ಯಮಿ ಡಾ. ರಾಜ್ ಮೃತ್ಯುಂಜಯಪ್ಪ ಹೇಳಿದರು. ಪಟ್ಟಣದ ಜೆಎಸ್‌ಎಸ್ ಶಾಲಾ- ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಎದುರಾದ ಕಷ್ಟಗಳಿಂದಲೇ ನಾನು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ಎಳವೆಯಿಂದಲೇ ಗುರಿಯನ್ನು ನಿಗದಿಪಡಿಸಿಕೊಂಡವರು ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ಹೋಗಬಹುದು ಎಂಬುದಕ್ಕೆ ನಾನೇ ಉದಾಹರಣೆ ಎಂದರು. ತಹಸೀಲ್ದಾರ್ ರುಕೀಯಾ ಬೇಗಂ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸುತ್ತೂರು ಶ್ರೀಗಳು ವಿದ್ಯೆ, ಅನ್ನ, ವಸತಿ ನೀಡಿದ್ದಾರೆ. ಇದರಿಂದ ಹಲವರ ಜೀವನ ಬೆಳಕಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಸತತ ಪರಿಶ್ರಮ ಪಡಬೇಕು ಎಂದರು. ಸ್ನೇಹ ಸ್ತ್ರೀ ಸಮಾಜದ ಅಧ್ಯಕ್ಷೆ ಸುಧಾ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಕೊಳ್ಳುವುದರ ಜತೆಗೆ, ಬದುಕುವ ಕಲೆ, ಸಂಸ್ಕಾರ ಹಾಗೂ ಗುಣವಂತಿಕೆಯನ್ನು ರೂಢಿಸಿಕೊಳ್ಳಬೇಕು ಎಂದರು. ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕರಾದ ಮಹಮದ್ ಅಜಂಪಾಷ, ಗಂಗಾಧರಯ್ಯ, ಪ್ರಾಂಶುಪಾಲ ಮಹದೇವಸ್ವಾಮಿ, ಶಿಕ್ಷಕರಾದ ಜಯಣ್ಣ, ಶೀಲಾ, ಶ್ವೇತಾ ಕಲಾವತಿ, ಜಯಶ್ರೀ ಇತರರು ಹಾಜರಿದ್ದರು.