ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಹದಗೆಟ್ಟ ರಸ್ತೆ ಹಾಗೂ ಅವೈಜ್ಞಾನಿಕವಾಗಿ ಕೇಬಲ್ ಅಳವಡಿಸಲು ಗುಂಡಿ ತೆಗೆದ ಪರಿಣಾಮ ಅವಘಡ ಸಂಭವಿಸುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಚೆಟ್ಟಳ್ಳಿಯ ಜನಪರ ಹೋರಾಟ ಸಮಿತಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದ್ದಾರೆ.
ಪ್ರಕೃತಿ ವಿಕೋಪದಿಂದ ಚೆಟ್ಟಳ್ಳಿ ರಸ್ತೆ ಹಾಳಾಗಿದೆ. ಬರೆ ಕುಸಿದ ಪರಿಣಾಮ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ಅಭಿವೃದ್ಧಿಗೆ ಅನುದಾನವೂ ಬಿಡುಗಡೆಯಾಗಿದೆ. ಆದರೆ, ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.
ಹದಗೆಟ್ಟ ರಸ್ತೆ ಬದಿ ಕೇಬಲ್ ಅಳವಡಿಕೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ತೆಗೆದಿರುವ ಗುಂಡಿ ಮುಚ್ಚಿಲ್ಲ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ವಾಹನಗಳು ಮುಖಾಮುಖಿಯಾದರೆ ರಸ್ತೆ ದಾಟುವುದು ದುಸ್ತರವಾಗಿದೆ. ಇದರಿಂದ ಬುಧವಾರ ರಸ್ತೆ ಅಪಘಾತ ದಲ್ಲಿ ಅಮಾಯಕ ಕಾರ್ಮಿಕ ಬಲಿಯಾಗಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಗುಂಡಿ ಮುಚ್ಚದ ಕಾರಣ ಈ ಅವಘಡಗಳು ಸಂಭವಿಸಿ ಸಾವು ಸಂಭವಿಸಿದೆ. ನೊಂದ ಕುಟುಂಬಕ್ಕೆ ಸಂಸ್ಥೆಯೇ ವೈಯಕ್ತಿಕ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಸಮಿತಿ ಸದಸ್ಯ ಧನಂಜಯ ಗೋಷ್ಠಿಯಲ್ಲಿದ್ದರು.