ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದ ಉಪ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಿಪಿಐ ಎಂ.ಆರ್.ಲವ ಮಾತನಾಡಿದರು. ಚಂದ್ರಹಾಸ, ಸ್ವಾಮಿನಾಯಕ್ ಇದ್ದರು. 
ನ್ಯೂಸ್

ಚುಂಚನಕಟ್ಟೆ ಪೊಲೀಸ್ ಉಪಠಾಣೆ ದುರಸ್ತಿಗೆ ಕ್ರಮ

ಕೆ.ಆರ್.ನಗರ: ಚುಂಚನಕಟ್ಟೆಯಲ್ಲಿರುವ ಪೊಲೀಸ್ ಠಾಣೆ ಪಾರಂಪರಿಕ ಕಟ್ಟಡ ಆಗಿದ್ದು, ಅದನ್ನು ಕೆಡವಲು ಸಾಧ್ಯವಿಲ್ಲ. ಆದರೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ವೃತ್ತ ನಿರೀಕ್ಷಕ ಎಂ.ಆರ್.ಲವ ಹೇಳಿದರು.


ತಾಲೂಕಿನ ಚುಂಚನಕಟ್ಟೆಯ ಗ್ರಾಮದಲ್ಲಿನ ಉಪ ಆರಕ್ಷಕ ಠಾಣೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಕುಂದು ಕೊರತೆ ಮತ್ತು ಅಹವಾಲು ಆಲಿಸಿ ಮಾತನಾಡಿದ ಅವರು, ಪಾರಂಪರಿಕ ಕಟ್ಟಡಗಳ ರಕ್ಷಣೆ ಅತ್ಯವಶ್ಯಕವಾಗಿದ್ದು ಸರ್ಕಾರದ ಸೂಚನೆ ಮತ್ತು ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.


ಗ್ರಾಪಂ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಚುಂಚನಕಟ್ಟೆ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾಗಿದ್ದು, ದಿನೇ ದಿನೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದ್ದರಿಂದ ಠಾಣೆಗೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರೆ ಮಹಿಳಾ ಪ್ರವಾಸಿಗರಿಗೆ ಅನುಕೂಲವಾಗುವುದು ಎಂದು ಹೇಳಿದರು.


ಚುಂಚನಕಟ್ಟೆ ಗ್ರಾಮದ ಕೃಷ್ಣ ಮಾತನಾಡಿ, ದಿನೇ ದಿನೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿದೆ. ಪ್ರಮುಖ ಕೇಂದ್ರ ಸ್ಥಾನವಾದ ಬಸವನವೃತ್ತದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಮನವಿ ಮಾಡಿದರು. ಶ್ರೀರಾಮಪುರ ಗ್ರಾಮದ ಪ್ರಸನ್ನ ಮಾತನಾಡಿ, ಆದಿ ಚುಂಚನಗಿರಿ ಆಶ್ರಮದ ಶಾಲೆ ಬಳಿ ಕುಡುಕರ ಹಾವಳಿ ಹೆಚ್ಚಿದ್ದು, ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿದೆ, ಇದನ್ನು ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಅಡಕೆ ಕಟಾವು ಆಗಲಿದ್ದು, ಅಡಕೆ ಕಳ್ಳತನ ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.


ಹೊಸೂರು ಗ್ರಾಮದ ಎಚ್.ಎಸ್.ರವಿ ಮಾತನಾಡಿ, ಗ್ರಾಮದ ಉಪಠಾಣೆ ತುಂಬಾ ಹಳೆಯದಾಗಿದ್ದು, ಶಿಥಿಲಗೊಂಡಿದೆ. ಭದ್ರತೆ ನೀಡುವ ಪೊಲೀಸರಿಗೆ ಇಲ್ಲಿ ಭದ್ರತೆ ಇಲ್ಲ. ಕಟ್ಟಡಕ್ಕೆ ಭದ್ರತೆ ಬೇಕಿದೆ ಎಂದು ಒತ್ತಾಯಿಸಿದರು.


ವೃತ್ತ ನೀರಿಕ್ಷಕ ಲವ ಮಾತನಾಡಿ, ನೀವು ನೀಡಿದ ದೂರು ಹಾಗೂ ಸಲಹೆಗಳನ್ನು ಬಗೆಹರಿಸಲು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು. ಸಂತೆ ದಿನದಂದು ಸಿಬ್ಬಂದಿ ನಿಯೋಜಿಸಿ ಟ್ರಾಫಿಕ್ ಸಮಸ್ಯೆ ಆಗದಂತೆ ಕ್ರಮವಹಿಸಲಾಗುತ್ತದೆ. ಅಲ್ಲದೇ ಅಡಿಕೆ ಬೆಳೆಯುವ ರೈತರ ಅನುಕೂಲಕ್ಕಾಗಿ ನಮ್ಮ ಇಲಾಖೆಯಿಂದಲೇ ಕರಪತ್ರ ವಿತರಿಸಿ ಜನ ಜಾಗೃತಿ ಮೂಡಿಸಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಮತ್ತು ಸ್ಥಳೀಯರು ಸಹಕರಿಸಿ ಎಂದು ಮನವಿ ಮಾಡಿದರು.

ಪಿಎಸ್‌ಐಗಳಾದ ಚಂದ್ರಹಾಸ, ಸ್ವಾಮಿನಾಯಕ್, ಎಎಸ್‌ಐ ವಸಂತಕುಮಾರ್, ಸಿಬ್ಬಂದಿಗಳಾದ ದಯಾನಂದ್, ಪ್ರವೀಣ್, ಅರಸು, ಗ್ರಾಪಂ ಸದಸ್ಯ ಗೋವಿಂದೇಗೌಡ, ಮುಖಂಡರಾದ ಅಜಯ್, ಪ್ರಭಾ, ಪಣಿ, ರಮೇಶ್, ಗೋವಿಂದನಾಯಕ, ಮಧು, ಶಂಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.