ಟೋಕಿಯೊ: ಜಪಾನ್ನ ಟೋಕಿಯೊದಲ್ಲಿ ಕ್ವಾಡ್ ಶೃಂಗ ಆರಂಭಕ್ಕೆ ಮುನ್ನ ಅನ್ಕನ್ವೆನ್ಶನಲ್ ಟ್ರೇಡ್ ಅಗ್ರಿಮೆಂಟ್ (ಅಸಾಂಪ್ರದಾಯಿಕ ವ್ಯಾಪಾರ ಒಪ್ಪಂದ) ಅನ್ನು ಅಮೆರಿಕ ಘೋಷಿಸಿದೆ. ಈ ಮೂಲಕ ಚೀನಾಕ್ಕೆ ಸೆಡ್ಡು ಹೊಡೆಯುವ ಕೆಲಸವನ್ನು ಮಾಡಿದೆ. ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್ರ್ಕ್(ಐಪಿಇಎಫ್)ನಲ್ಲಿ ಭಾರತವೂ ಸೇರಿ 12 ರಾಷ್ಟ್ರಗಳು ಇದರ ಆರಂಭಿಕ ಪಾಲುದಾರರು. ಜಗತ್ತಿನ ಜಿಡಿಪಿಯಲ್ಲಿ ಈ ರಾಷ್ಟ್ರಗಳ ಪಾಲು ಶೇಕಡ 40 ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ರಾಷ್ಟ್ರೀಯ ಭದ್ರತಾ ಸಲೆಹಗಾರ ಜೇಕ್ ಸುಲ್ಲಿವಾನ್, ಇದು ‘ಸಾಂಪ್ರದಾಯಿಕ ವ್ಯಾಪಾರ ಒಪ್ಪಂದ’ ಅಲ್ಲ. ಇದು ಹೊದ ಮಾದರಿಯ ಆರ್ಥಿಕ ವ್ಯವಸ್ಥೆಯಾಗಿದ್ದು, ಇದರಲ್ಲಿ 21ನೇ ಶತಮಾನಕ್ಕಾಗಿ ವ್ಯಾಪಾರ, ತಂತ್ರಜ್ಞಾನ ಮತ್ತು ಸಪ್ಲೈಚೇನ್ಗಳ ನಿಯಮ ಮತ್ತು ನಿಬಂಧನೆಗಳನ್ನು ಒಳಗೊಂಡಿರುತ್ತದೆ ಎಂದು ಐಪಿಇಎಫ್ ಅನ್ನು ಬಣ್ಣಿಸಿದ್ದಾರೆ. ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ, ಭಾರತದ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಐಪಿಇಎಫ್ ಸೋಮವಾರ ಉದ್ಘಾಟನೆಗೊಂಡಿದೆ.
ಅಮೆರಿಕದ ಪಾತ್ರ: ಇಂಡೋ-ಫೆಸಿಫಿಕ್ ಪ್ರಾಂತ್ಯದಲ್ಲಿ ಅಮೆರಿಕದ ಭಾಗವಹಿಸುವಿಕೆಯ ವಿಚಾರದಲ್ಲಿ ಐಪಿಇಎಫ್ ಐತಿಹಾಸಿಕ ಮೈಲಿಗಲ್ಲು. ಈ ಒಪ್ಪಂದ ದೊಡ್ಡದೊಂದು ಪರಿಣಾಮವನ್ನು ಈ ಪ್ರದೇಶದಲ್ಲಿ ಮಾಡಲಿದೆ. ಅಧ್ಯಕ್ಷ ಜೋ ಬೈಡೆನ್ ಅವರ ಮೊದಲ ಅವಧಿಯ ಕೊನೆಗೆ ಅವಲೋಕನ ಮಾಡುವಾಗ ಇಂಡೋ-ಪೆಸಿಫಿಕ್ ವಲಯದ ಚಟುವಟಿಕೆಗಳೂ ಒಳಗೊಳ್ಳಲಿದೆ ಎಂದು ಜೇಕ್ ಸುಲ್ಲಿವಾನ್ ಹೇಳಿದ್ದಾರೆ.
ಐಪಿಇಎಫ್ ಎಂದರೆ...
ಇಂಡೋ-ಫೆಸಿಫಿಕ್ ಪ್ರಾಂತ್ಯದಲ್ಲಿ ಚೀನಾದ ವಾಣಿಜ್ಯ ಪ್ರಾಬಲ್ಯವನ್ನು ಮುರಿಯುವುದಕ್ಕೆ ಅಮೆರಿಕ ಆರಂಭಿಸಿದ ವಾಣಿಜ್ಯ ವ್ಯಾಪಾರ ಒಪ್ಪಂದ. ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್ರ್ಕ್ (ಐಪಿಇಎಫ್) ಎಂಬುದು ಪಾಲುದಾರ ರಾಷ್ಟ್ರಗಳ ನಡುವಿನ ವ್ಯಾಪಾರ ಸಹಕಾರ, ಡಿಜಿಟಲ್ ಆರ್ಥಿಕತೆಯ ಮಾನದಂಡ, ತಂತ್ರಜ್ಞಾನ, ಸಪ್ಲೈಚೇನ್ ವ್ಯವಸ್ಥೆ, ಡಿಕಾರ್ಬನೈಸೇಷನ್, ಸ್ವಚ್ಛ ಇಂಧನ, ಮೂಲಸೌಕರ್ಯ ಸೇರಿ ಎಲ್ಲ ವಹಿವಾಟುಗಳ ಪಾಲುದಾರಿಕೆಗೆ ಪೂರಕ ವಾತಾವರಣ ಒದಗಿಸುವುದು ಎಂದು ಜೇಕ್ ಸುಲ್ಲಿವಾನ್ ಹೇಳಿದ್ದಾರೆ. ಆದಾಗ್ಯೂ ಇದು 2017ರಲ್ಲಿ ಟ್ರಂಪ್ ಸರ್ಕಾರ ಹಿಂದೆ ಸರಿದ ಟ್ರಾನ್ಸ್ ಪೆಸಿಫಿಕ್ ಪಾಲುದಾರಿಕೆಯ ಹೊಸ ರೂಪ ಎಂದು ಹೇಳಲಾಗುತ್ತಿದೆ.
ಐಪಿಇಎಫ್ ಪಾಲುದಾರರು: ಭಾರತ, ಜಪಾನ್, ಆಸ್ಟ್ರೇಲಿಯಾ, ಬ್ರೂನಿ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಂ.
ಆರ್ಸಿಇಪಿಗೆ ಪ್ರತಿಸ್ಪರ್ಧಿಯೇ?: ಐಪಿಇಎಫ್ ಮಾದರಿಯಲ್ಲೇ ಇತರೆ ಕೆಲವು ಆರ್ಥಿಕ ಫ್ರೇಮ್ರ್ಕ್ಗಳು ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಚಾಲ್ತಿಯಲ್ಲಿದೆ. ಅಸಿಯಾನ್ ರಾಷ್ಟ್ರಗಳ ರೀಜಿನಲ್ ಕಾಂಪ್ರಹೆನ್ಸಿವ್ ಎಕನಾಮಿಕ್ ಪಾರ್ಟನರ್ಶಿಪ್ (ಆರ್ಸಿಇಪಿ) ಮುಖ್ಯವಾದುದು. ಇದರಲ್ಲಿ ಚೀನಾ ಕೂಡ ಪಾಲುದಾರ ರಾಷ್ಟ್ರ. ಇದು ಜಗತ್ತಿನ ಅತಿದೊಡ್ಡ ವ್ಯಾಪಾರ ಬ್ಲಾಕ್ ಆಗಿ ರೂಪುಗೊಂಡಿದೆ. ಇದರಲ್ಲಿ 15 ಸದಸ್ಯ ರಾಷ್ಟ್ರಗಳು- 10 ಅಸಿಯಾನ್ ರಾಷ್ಟ್ರಗಳು, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್. ಚೀನಾ ಉತ್ಪನ್ನಗಳ ಕುರಿತಾದ ಕೆಲವೊಂದು ಬಗೆಹರಿಯದ ವಿಚಾರಗಳ ಕಾರಣ ಆರ್ಸಿಇಪಿಯಿಂದ ಭಾರತ ಹೊರಬಿದ್ದಿದೆ. ಕ್ವಾಡ್ನ ಸದಸ್ಯ ರಾಷ್ಟ್ರಗಳಾದ ಜಪಾನ್ ಮತ್ತು ಆಸ್ಟ್ರೇಲಿಯಾ ಗಳು ಆರ್ಸಿಇಪಿಯಲ್ಲಿವೆ. ಅಮೆರಿಕ ಇದರ ಪಾಲುದಾರ ರಾಷ್ಟ್ರವಲ್ಲ.
ಇಂಡೋ ಪೆಸಿಫಿಕ್ ಹೂಡಿಕೆ ಕೇಂದ್ರ: ಎಲ್ಲವನ್ನೂ ‘ಅಂತರ್ಗತ’ ಮಾಡಿಕೊಳ್ಳುವ ಮತ್ತು ಹೊಂದಿಕೊಳ್ಳುವ ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್ರ್ಕ್ ಅನ್ನು ರೂಪಿಸಲು ಭಾರತವು ಪಾಲುದಾರ ರಾಷ್ಟ್ರಗಳೊಂದಿಗೆ ಸೇರಿ ಕೆಲಸ ಮಾಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದರು. ಕ್ವಾಡ್ ಶೃಂಗದ ಮುನ್ನಾ ದಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಐಪಿಇಎಫ್ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ಇಂಡೋ-ಪೆಸಿಫಿಕ್ ಪ್ರಾಂತ್ಯದ ಸಮಾನ ಗುರಿಗಳನ್ನು ಸಾಧಿಸುವಲ್ಲಿ ಐಪಿಇಎಫ್ ಮಹತ್ವದ ಪಾತ್ರವಹಿಸಲಿದೆ. ಜಾಗತಿಕ ಆರ್ಥಿಕ ಬೆಳವಣಿಗೆಗೆ ಇಂಡೋ-ಪೆಸಿಫಿಕ್ ಪ್ರಾಂತ್ಯವನ್ನು ಇಂಜಿನ್ ಆಗಿ ರೂಪಿಸಲು ಇದು ನೆರವಾಗಲಿದೆ. ಸಪ್ಲೈ ಚೇನ್ ಜಾಲಕ್ಕೆ 3 ಟಿ - ಟ್ರಸ್ಟ್, ಟ್ರಾನ್ಸ್ಪರೆನ್ಸಿ, ಟೈಮ್ೈನ್ನೆಸ್ ಬುನಾದಿ ಆಗಬೇಕು. ಇಂಡೋ-ಪೆಸಿಫಿಕ್ ಪ್ರಾಂತ್ಯದ ಅಭಿವೃದ್ಧಿ, ಶಾಂತಿ ಮತ್ತು ಸುವ್ಯವಸ್ಥೆಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ಇಂಡೋ ಪೆಸಿಫಿಕ್ ಪ್ರಾಂತ್ಯವು ಮ್ಯಾನುಫ್ಯಾಕ್ಚರಿಂಗ್, ಆರ್ಥಿಕ ಚಟುವಟಿಕೆ, ಜಾಗತಿಕ ವ್ಯಾಪಾರ ಮತ್ತು ಹೂಡಿಕೆಯ ಕೇಂದ್ರ ಸ್ಥಾನ. ಗುಜರಾತಿನ ಲೋಹ್ತಾಲ್ ಬಂದರು ಜಗತ್ತಿನ ಅತ್ಯಂತ ಪ್ರಾಚೀನ ವಾಣಿಜ್ಯ ಬಂದರು ಎಂಬುದನ್ನು ನೆನಪು ಮಾಡಿಕೊಳ್ಳಬಹುದು. ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಭಾರತವು ಶತಮಾನಗಳಿಂದ ವ್ಯಾಪಾರದ ಕೇಂದ್ರಬಿಂದುವಾಗಿತ್ತು ಎಂಬುದನ್ನು ಇತಿಹಾಸ ನಿರೂಪಿಸಿದೆ ಎಂದು ಮೋದಿ ವಿವರಿಸಿದರು.
ಜಪಾನ್ ಸಪ್ತಾಹ ಆಚರಣೆಗೆ ಕರೆ: ದೇಶದ ಬೆಳವಣಿಗೆಯಲ್ಲಿ ಜಪಾನ್ ಕೊಡುಗೆಯನ್ನು ಗೌರವಿಸಲು ಭಾರತದಲ್ಲಿ ‘ಜಪಾನ್ ಸಪ್ತಾಹ’ ಆಚರಿಸುವಂತೆ 34 ಜಪಾನಿ ಕಂಪನಿಗಳ ಸಿಇಒಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು. ಈ ಎಲ್ಲ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿದ್ದು, ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂಬುದನ್ನು ಅವರು ಸ್ಮರಿಸಿದರು. ಅಲ್ಲದೆ, ಇನ್ನಷ್ಟು ಕಂಪನಿಗಳನ್ನು ಜೋಡಿಸಿಕೊಳ್ಳುವಂತೆ ಕರೆ ನೀಡಿದರು.
ಭಾರತ-ಜಪಾನ್ಗಳು ಸಹಜ ಪಾಲುದಾರ ರಾಷ್ಟ್ರಗಳು. ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕ ವಾಗಿ, ವ್ಯಾಪಾರ, ವಾಣಿಜ್ಯ ಸೇರಿ ಎಲ್ಲದರಲ್ಲೂ ಸಹಕಾರ, ಸಮಾನ ಹಿತ ಕಾಯುವ ರಾಷ್ಟ್ರಗಳು. ಹೈಸ್ಪೀಡ್ ರೈಲು, ಕೈಗಾರಿಕಾ ಕೇಂದ್ರಗಳ ಸ್ಥಾಪನೆ ಯಲ್ಲೂ ಜಪಾನ್ ಸಹಕಾರ ಹೆಚ್ಚಿದೆ. ಭಾರತದ ಅಭಿವೃದ್ಧಿಯಲ್ಲಿ ಜಪಾನ್ ಪಾತ್ರ ಬಹುದೊಡ್ಡದು. | ನರೇಂದ್ರ ಮೋದಿ ಪ್ರಧಾನಮಂತ್ರಿ
ಬಾಲಕನೊಂದಿಗೆ ಹಿಂದಿ ಮಾತುಕತೆ: ಹೋಟೆಲ್ ಹೊರಗೆ ತಮಗಾಗಿ ಕಾಯುತ್ತಿದ್ದವರ ಕಡೆಗೆ ಬಂದ ಪ್ರಧಾನಿ ಮೋದಿ, ಅಲ್ಲಿಂದ ಜಪಾನ್ ಬಾಲಕನ ಜತೆಗೆ ಹಿಂದಿಯಲ್ಲಿ ಸಂವಹನ ನಡೆಸಿದರು. ಈ ವಿಡಿಯೋ ವೈರಲ್ ಆಗಿದ್ದು, ಅವರು ಬಾಲಕನ ಹಿಂದಿ ಭಾಷೆಯಲ್ಲಿ ಮಾತುಗಾರಿಕೆಗೆ ಮೆಚ್ಚಿ ತಲೆದೂಗಿದರು. ಆತ ಬರೆದಿದ್ದ ತಿರಂಗಾ ಚಿತ್ರದ ಕೆಳಗೆ ಆಟೋಗ್ರಾಫ್ ಬರೆದುಕೊಟ್ಟರು.
ಭಾರತ್ ಚಲೋ, ಭಾರತ್ ಸೇ ಜುಡೋ: ಭಾರತೀಯ ಸಮುದಾಯದವರ ಜತೆಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ್ ಚಲೋ, ಭಾರತ್ ಸೇ ಜುಡೋ ಅಭಿಯಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಈ ಅಭಿಯಾನದಲ್ಲಿ ಭಾರತದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ, ಸುಧಾರಣಾ ಕ್ರಮಗಳ ವಿವರಗಳನ್ನು ಪ್ರದರ್ಶಿಸಲಾಗಿತ್ತು. ದೇಶ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿದೆ. ಇನ್ನು 25 ವರ್ಷಕ್ಕೆ ಶತಮಾನೋತ್ಸವ ಆಚರಣೆ ಆಗಲಿದೆ. ಹೀಗಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಅವರು ಭಾರತೀಯರಿಗೆ ಕರೆ ನೀಡಿದರು. 700ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.