ನವದೆಹಲಿ: ಪೂರ್ವ ಲಡಾಖ್ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಬದ್ಧ ಎಂದು ಹೇಳಿದ್ದ ಚೀನಾ, ಮತ್ತೊಮ್ಮೆ ಗಡಿ ಉಲ್ಲಂಘನೆ ಮಾಡಲು ಯತ್ನಿಸಿದೆ. ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯ ಗಡಿಯಲ್ಲಿ ಶನಿವಾರ ರಾತ್ರೋರಾತ್ರಿ ಸರಹದ್ದು ಉಲ್ಲಂಘಿಸಿ ಭಾರತದ ಭೂಭಾಗ ಒತ್ತುವರಿಗೆ ಚೀನಾ ಸೇನೆ ಮುಂದಾಗಿತ್ತು. ಆದರೆ, ಭಾರತೀಯ ಸೇನೆ ಇದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಸೇನಾ ಜಮಾವಣೆಯನ್ನು ಹೆಚ್ಚಿಸಲಾಗಿದ್ದು, ಈ ಕಾರಣಕ್ಕಾಗಿ ಶ್ರೀನಗರ-ಲಡಾಖ್ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಗಡಿಯಲ್ಲಿ ಚೀನಾ ಸೇನೆ ಕೂಡ ಜಾಗೃತವಾಗಿರುವ ಕಾರಣ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಈ ಮಧ್ಯೆ, ಗಲ್ವಾನ್ ಕಣಿವೆಯಲ್ಲಿ ಸಂಘರ್ಷ ಮರುಕಳಿಸದಂತೆ ತಡೆಯಲು ಉಭಯ ಸೇನೆಗಳ ಬ್ರಿಗೇಡಿಯರ್ ಹಂತದ ಮಾತುಕತೆ ನಡೆದಿದೆ ಎಂದು ಸರ್ಕಾರ ತಿಳಿಸಿದೆ.
ಗಲ್ವಾನ್ ಕಣಿವೆಯ 14ನೇ ಗಸ್ತು ಪಾಯಿಂಟ್ ಬಳಿ ಜೂನ್ 15ರಂದು ಸಂಘರ್ಷ ನಡೆದ ನಂತರ ಸೇನೆ ಮತ್ತು ರಾಜತಾಂತ್ರಿಕ ಮಾರ್ಗದಲ್ಲಿ ಐದು ಸುತ್ತಿನ ಮಾತುಕತೆ ನಡೆದಿದೆ. ಈ ವೇಳೆ ಗಡಿಯಿಂದ ಸೇನೆ ಹಿಂಪಡೆಯಲು ಚೀನಾ ಒಪ್ಪಿಕೊಂಡಿದೆ. ಆದರೆ, ಪ್ಯಾಂಗಾಂಗ್ ಸರೋವರ ಬಳಿಯ ಫಿಂಗರ್ ಪಾಯಿಂಟ್ಸ್, ಹಾಟ್ಸ್ಪಿ›ಂಗ್ಸ್, ದೆಪ್ಸಾಂಗ್ ಪ್ರಸ್ಥ ಭೂಮಿ ಸೇರಿ ಅನೇಕ ಗಡಿ ಪಾಯಿಂಟ್ಗಳಲ್ಲಿ ಸೇನೆ ವಾಪಸಾತಿ ಆಗಿಲ್ಲ. ಇಂಥ ಹೊತ್ತಿನಲ್ಲಿ ಚೀನಾ ಸೇನೆ ಮತ್ತೆ ಗಡಿ ಉಲ್ಲಂಘನೆಗೆ ಮುಂದಾಗಿರುವುದು ಆತಂಕ ಮೂಡಿಸಿದೆ.
ಪ್ಯಾಂಗಾಂಗ್ ಸರೋವರ: ಪ್ಯಾಂಗಾಂಗ್ ತ್ಸೊ ಸರೋವರದ ಗಡಿಯನ್ನು ಗಸ್ತಿನ ದೃಷ್ಟಿಯಿಂದ 8 ಫಿಂಗರ್ ಪಾಯಿಂಟ್ಗಳಲ್ಲಿ ಗುರುತಿಸಲಾಗಿದೆ. ಈ ಮೊದಲು ಭಾರತದ ಸೇನೆಯು ಎಲ್ಲ ಪಾಯಿಂಟ್ಗಳವರೆಗೂ ಗಸ್ತು ತಿರುಗುತ್ತಿತ್ತು ಎನ್ನಲಾಗಿದೆ. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕ್ ಗಡಿಯತ್ತ ಸೇನಾ ತುಕಡಿ ಹೆಚ್ಚಳ ಮಾಡಿದ ಕಾರಣ ಪೂರ್ವ ಲಡಾಖ್ ಭಾಗದಲ್ಲಿ ಸೇನೆಯನ್ನು ಕಡಿಮೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಚೀನಾ ಪಡೆ ಸ್ವಲ್ಪ ಸ್ವಲ್ಪವೇ ಗಡಿಯನ್ನು ವಿಸ್ತರಿಸಿಕೊಂಡು, ಸೇನೆಯ ಮೂಲ ಸೌಕರ್ಯವನ್ನು ಹೆಚ್ಚಿಸಿಕೊಂಡಿತು. ಕಳೆದ ಮೇ ತಿಂಗಳಲ್ಲಿ ಚೀನಾ ಸೇನೆ ಮತ್ತಷ್ಟು ಒತ್ತುವರಿಗೆ ಮುಂದಾದಾಗ 4ನೇ ಫಿಂಗರ್ ಪಾಯಿಂಟ್ ಬಳಿ ಉಭಯ ಸೇನೆಗಳ ಮಧ್ಯೆ ಜಟಾಪಟಿ ನಡೆದಿತ್ತು.
ಎಚ್ಚರಿಕೆ ನೀಡಿದ್ದ ರಾವತ್: ಸೇನೆ ಹಿಂಪಡೆಯುವ ಬಗ್ಗೆ ಸೇನಾ ಮತ್ತು ರಾಜತಾಂತ್ರಿಕ ಮಾತುಕತೆಯನ್ನು ಚೀನಾ ಗೌರವಿಸದೆ, ಹಠಮಾರಿ ಧೋರಣೆ ಮುಂದುವರಿಸಿದರೆ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ನಮಗೆ ಗೊತ್ತು ಎಂದು ಸೇನೆಯ ಮೂರೂ ಪಡೆಗಳ ಪ್ರಧಾನ ದಂಡನಾಯಕ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಕಳೆದವಾರ ಎಚ್ಚರಿಕೆ ನೀಡಿದ್ದರು. 1962ರ ನಂತರ ಚೀನಾ ಜತೆಗೆ ಅತ್ಯಂತ ಗಂಭೀರ ಸನ್ನಿವೇಶ ಉಂಟಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಕಳೆದ ವಾರ ಹೇಳಿದ್ದರು.
ಪ್ಯಾಂಗಾಂಗ್ ಸರೋವರದಲ್ಲಿ ಆಗಿದ್ದೇನು?: ಆಗಸ್ಟ್ 29-30ರ ರಾತ್ರಿ ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯತ್ತ ಚೀನಾ ಸೇನೆ ಏಕಾಏಕಿ ದೊಡ್ಡ ಸಂಖ್ಯೆಯಲ್ಲಿ ಮುನ್ನುಗಿತ್ತು. ಚೀನಾ ಸೇನೆಯ ಚಲನವಲನದ ಮೇಲೆ ಕಣ್ಣಿಟ್ಟಿದ ಭಾರತೀಯ ಸೇನೆ ಕೂಡಲೇ ಎಚ್ಚೆತ್ತುಕೊಂಡು, ಚೀನಾ ಸೇನೆಯನ್ನು ತಡೆಯಿತು. ಈ ಸಂದರ್ಭದಲ್ಲಿ ಎರಡೂ ಸೇನೆಗಳು ಮುಖಾಮುಖಿಯಾದರೂ ಕೈ ಕೈ ಮಿಲಾಯಿಸುವಿಕೆ ಅಥವಾ ಘರ್ಷಣೆ ನಡೆಯಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ವಾಹನ ಸಂಚರಿಸುವ ರಸ್ತೆಗಳು ಇಲ್ಲ, ಕಚ್ಚಾ ರಸ್ತೆಯಲ್ಲೇ ಚೀನಾ ಸೇನೆ ಬಂದಿತ್ತು. ಚೀನಾ ಸೇನೆ ಮುಂದುವರಿಯುವುದಕ್ಕೂ ಮೊದಲು ಜೆ-20 ಯುದ್ಧ ವಿಮಾನವನ್ನು ಪೂರ್ವ ಲಡಾಖ್ಗೆ ಸನಿಹವಿರುವ ವಾಯುನೆಲೆಗೆ ತಂದು ನಿಲ್ಲಿಸಿತ್ತು. ಈಗ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಗಡಿ ದಾಟಿಲ್ಲ ಎಂದ ಚೀನಾ: ನಮ್ಮ ಸೇನೆ ಭಾರತದ ಗಡಿ ದಾಟಿಲ್ಲ ಎಂದು ಚೀನಾ ಸಮರ್ಥನೆ ಮಾಡಿಕೊಂಡಿದೆ. ಗಡಿ ಉದ್ವಿಗ್ನತೆ ಬಗ್ಗೆ ಪ್ರತಿಕ್ರಿಯಿಸಿ ರುವ ಚೀನಾ ವಿದೇಶಾಂಗ ಸಚಿವಾಲಯ, ಉಭಯ ಸೇನೆಗಳ ಕಮಾಂಡರ್ ಹಂತದ ಮಾತುಕತೆ ನಡೆದಿದೆ ಎಂದಿದೆ.