ಬೆಂಗಳೂರು: ಚಿನ್ನಾಭರಣ ವ್ಯಾಪಾರಿಯ ಮನೆಯಲ್ಲಿ ನಗದು ಸೇರಿ ೧೫.೧೫ ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚಿಸಲಾಗಿದ್ದು ಈ ಪೈಕಿ ಒಂದು ತಂಡ ನೇಪಾಳಕ್ಕೆ ತೆರಳಿದೆ.
ಆರೋಪಿಗಳು ನ. ೧ ರಂದು ವಿಜಯನಗರ ಬಳಿಯ ಹೊಸಹಳ್ಳಿ ಎಕ್ಸ್‌ಟೆನ್ಷನ್ ಬಡಾವಣೆಯಲ್ಲಿ ಚಿನ್ನಾಭರಣ ವ್ಯಾಪಾರಿ ಸುರೇಂದ್ರಕುಮಾರ್ ಜೈನ್ ಮನೆಯಲ್ಲಿ ಅಂದಾಜು ೧೮ ಕೆ.ಜಿ. ಚಿನ್ನಾಭರಣ ಹಾಗೂ ೪೦.೮೦ ಲಕ್ಷ ರೂ. ನಗದು ಸೇರಿದಂತೆ ಬರೋಬ್ಬರಿ ೧೫.೧೫ ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಸುರೇಂದ್ರಕುಮಾರ್ ಅವರು ಮಾಗಡಿ ರಸ್ತೆಯ ವಿದ್ಯಾರಣ್ಯನಗರದ ಒಂದನೇ ಮುಖ್ಯ ರಸ್ತೆಯಲ್ಲಿ ಅರಿಹಂತ್ ಜುವೆಲ್ಲರ್ಸ್ ಎಂಬ ಮಳಿಗೆ ನಡೆಸುತ್ತಿದ್ದು, ಸುಮಾರು ೩೦ ವರ್ಷಗಳಿಂದ ಚಿನ್ನಾಭರಣ ವ್ಯಾಪಾರ ಮಾಡುತ್ತಿದ್ದಾರೆ. ಅವರ ಮಳಿಗೆಯಲ್ಲಿ ಏಳು ಮಂದಿ ಕೆಲಸಗಾರರಿದ್ದು, ಈ ಪೈಕಿ ಆರು ಮಂದಿ ಬೇರೆಡೆ ಸ್ವಂತ ಮನೆಗಳಲ್ಲಿ ವಾಸವಾಗಿದ್ದಾರೆ. ಆದರೆ, ಮಳಿಗೆಯ ಸೆಕ್ಯೂರಿಟಿ ಗಾರ್ಡ್ ನೇಮಿರಾಜ್‌ಗೆ ಸ್ವಂತ ಮನೆಯಿಲ್ಲದ ಕಾರಣ ಆತ ಪತ್ನಿಯೊಂದಿಗೆ ಸುರೇಂದ್ರಕುಮಾರ್‌ರ ಮನೆಯ ಪಾರ್ಕಿಂಗ್ ಸ್ಥಳದ ಕೊಠಡಿಯಲ್ಲಿ ವಾಸವಾಗಿದ್ದ. ಆರು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ನೇಮಿರಾಜ್, ಸುರೇಂದ್ರಕುಮಾರ್ ಮನೆಯ ಮುಂಭಾಗದ ಮತ್ತು ಮಹಡಿಯಲ್ಲಿನ ಗಿಡಗಳಿಗೆ ನೀರು ಹಾಕುತ್ತಿದ್ದ. ಜತೆಗೆ, ಸುರೇಂದ್ರಕುಮಾರ್ ಕುಟುಂಬ ಸದಸ್ಯರು ಹೇಳುವ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ಹೀಗಾಗಿ, ಆತನಿಗೆ ಸುರೇಂದ್ರಕುಮಾರ್ ಕುಟುಂಬ ಸದಸ್ಯರೆಲ್ಲರ ಪರಿಚಯವಿತ್ತು. ಅಲ್ಲದೆ, ಅವರ ಮನೆಯಲ್ಲಿ ಚಿನ್ನಾಭರಣ ಹಾಗೂ ಹಣ ಇಡುವ ಸಂಗತಿಯೂ ಗೊತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.