ಕೆಜಿಎಫ್: ಕೆಜಿಎಫ್ ತಾಲೂಕಿನ 970 ಎಕರೆ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ, ಗಣಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ತಾಲೂಕಿನ ಮಾರಿಕುಪ್ಪಂನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು&ಕೊರತೆ ಸಭೆ ಹಾಗೂ ಜನಸ್ಪಂದನವನ್ನು ಉದ್ಘಾಟಿಸಿ ಮಾತನಾಡಿದರು.
ಪಡಿತರ ಚೀಟಿ, ವೃದ್ಧಾಪ್ಯ ವೇತನ, ಆಧಾರ್ಕಾರ್ಡ್, ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಆದಾಯ ಪ್ರಮಾಣ ಪತ್ರ, ಸ್ವಚ್ಛತೆ ಸೇರಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ನೇರವಾಗಿ ನಿಮ್ಮ ಮನೆಯ ಬಾಗಿಲಿಗೆ ಬಂದಿದ್ದೇವೆ ಎಂದರು.
20 ಕೋಟಿ ರೂ.ರಸ್ತೆಗಳ ಟೆಂಡರ್: ನಗರದ ಸೂರಜ್ಮಲ್ ವೃತ್ತದಿಂದ ಮೊಯ್ದು ಪೆಟ್ರೋಲ್ ಬಂಕ್, ಅಂಬೇಡ್ಕರ್ ಶಾಲೆಯವರೆಗೆ ಈಗಾಗಲೇ ಡಾಂಬರು ರಸ್ತೆ ಕಾಮಗಾರಿ ಮುಗಿದಿದ್ದು, ಸೂರಜ್ಮಲ್ ವೃತ್ತದಿಂದ ದಾಸ್ ಚಿನ್ನ ಸವರಿ ಮನೆಯವರೆಗೂ ದ್ವಿಪಥ ರಸ್ತೆ, ಆ್ಯಂಡ್ರಸನ್ ಪೇಟೆಯಿಂದ ರಾಜೇಶ್ ಕ್ಯಾಂಪ್ವರೆಗೂ ರಸ್ತೆ ಅಗಲೀಕರಣದ 20 ಕೋಟಿ ರೂ.ಕಾಮಗಾರಿ ಪ್ರಗತಿಯಲ್ಲಿದೆ ಎಂದು ರೂಪಕಲಾ ಹೇಳಿದರು.
68 ಕೋಟಿ ರೂ.ಕುಡಿಯುವ ನೀರಿನ ಕಾಮಗಾರಿ: ಬೇತಮಂಗಲದಿಂದ ಕೆಜಿಎಫ್ವರೆಗೆ ಜನರ ಕುಡಿಯುವ ನೀರಿನ ಯೋಜನೆಗೆ 8 ಕಿಮೀ. ಹೊಸ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದೆ. 200, 150 ಎಚ್ಪಿ ಎರಡು ಬೃಹತ್ ಮೋಟಾರ್ ಅಳವಡಿಸಿ, ಕೆಜಿಎಫ್ ನಗರಕ್ಕೆ ನೀರಿನ ಸರಬರಾಜು ಮಾಡಿ, 72 ಕಿ.ಮೀ ಉದ್ದದ ಟ್ಯಾಪ್ ಮೂಲಕ ಮನೆ ಮನೆಗೂ ಕುಡಿಯುವ ನೀರು ಒದಗಿಸಲು ಕೋರ್ಮಂಡಲ್, ಪೈಪ್ಲೈನ್ ಹಾಗೂ ಜಲಮಂಡಳಿ ಹಿಂಭಾಗದಲ್ಲಿ ಮೂರು ಬೃಹತ್ ನೀರಿನ ಟ್ಯಾಂಕ್ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕಿ ಹೇಳಿದರು.
ಜಲಮಂಡಳಿಯಿಂದ ನಗರದ 35 ವಾರ್ಡ್ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ 25 ಕ್ಕೂ ಹೆಚ್ಚು ಕುಡಿಯುವ ನೀರಿನ ಟಕಗಳು ಸಾರ್ವಜನಿಕರಿಗೆ ನೀರು ಪೂರೈಕೆ ಮಾಡುತ್ತಿವೆ. 13 ವಾರ್ಡ್ಗಳಲ್ಲಿ 44 ಕೋಟಿ ರೂ.ಗಳ ಒಳಚರಂಡಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ನೀಡಲಾಗಿದೆ. ಪಾರಂಡಹಳ್ಳಿಯ ಉರಿಗಾಂ ಕೆರೆಯ ಬಳಿ 4 ಕೋಟಿ ರೂ. ವೆಚ್ಚದಲ್ಲಿ ಮಲಿನ ಶುದ್ಧೀಕರಣ ಘಟಕದ(ಎಸ್ಟಿಪಿ) ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ಶಾಸಕಿ ಎಂ. ರೂಪಕಲಾ ದ್ವಿಚಕ್ರವಾಹನದಲ್ಲಿ ತೆರಳಿದರು.
ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಮಾತನಾಡಿ, ನಗರದ 35 ವಾರ್ಡ್ಗಳ ಸರ್ವತೋಮುಖ ಅಭಿವೃದ್ಧಿಗೆ 15 ಕೋಟಿ ರೂ. ಟೆಂಡರ್ ಕರೆದಿದ್ದು, ನಗರೋತ್ಥಾನದ 40 ಕೋಟಿ ರೂ. ಕಾಮಗಾರಿಗಳಿಗೆ ಪ್ರಸ್ತಾವನೆ ಸಿದ್ಧಪಡಿಸಿ, ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನಗರದ ಪ್ರಮುಖ ರಸ್ತೆ&ಚರಂಡಿ ಅಭಿವೃದ್ಧಿಗೆ ಪ್ರತಿ ವಾರ್ಡ್ಗೆ 90 ರಿಂದ 95 ಲಕ್ಷ ರೂ. ಅನುದಾನ ನೀಡಲಾಗಿದೆ. ಟೆಂಡರ್ ಬಳಿಕ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.
ನಗರಸಭೆ ಸದಸ್ಯರಾದ ಅನ್ಬಶಾಂತಿ, ಸನಾ, ಪೌರಾಯುಕ್ತೆ ಮಾಧವಿ ಇದ್ದರು,