ನ್ಯೂಸ್

ಚಿತ್ರದುರ್ಗ ದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭ

ಚಿತ್ರದುರ್ಗ: ನಗರದಲ್ಲಿ ಪ್ರಸಕ್ತ ವರ್ಷದಲ್ಲೇ ಕೇಂದ್ರೀಯ ವಿದ್ಯಾಲಯ ಕಾರ‌್ಯಾರಂಭವಾಗಲಿದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸೈನ್ಸ್ ಕಾಲೇಜು ಹೊಸ ಕಟ್ಟಡದಲ್ಲಿ ಆರಂಭದ ಮೂರು ವರ್ಷಗಳ ಕಾಲ ವಿದ್ಯಾಲಯದ ತರಗತಿಗಳು ಆರಂಭವಾಗಲಿದ್ದು, ಈ ಅವಧಿ ಪೂರ್ಣವಾಗುವುದರೊಳಗೆ ಕುಂಚಿಗನಾಳ್ ಬಳಿಯ 10 ಎಕರೆ ಪ್ರದೇಶದಲ್ಲಿ ವಿದ್ಯಾಲಯದ ಕ್ಯಾಂಪಸ್ ನಿರ್ಮಾಣವಾಗಲಿದೆ ಎಂದರು.

ನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರದಿಂದ ಮೆಡಿಕಲ್ ಕಾಲೇಜು ಆರಂಭಕ್ಕೆ ಪ್ರಯತ್ನಿಸಲಾಗಿದೆ.

ಶಿವಮೊಗ್ಗ -ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟ ವ್ಯಾಪ್ತಿಯ ಹೆಚ್ಚುವರಿ ಯೂನಿಟ್‌ನ್ನು(ಡೈರಿ)ಚಳ್ಳಕೆರೆಯಲ್ಲಿ ಸ್ಥಾಪಿಸುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಮಾಡಲಾಗಿದೆ. ನಗರದ ಕೋಟೆ ಬಳಿ ಮದಕರಿ ನಾಯಕರ ಹೆಸರಿನ ಥೀಮ್ ಪಾರ್ಕ್ ಹಾಗೂ ತಿಮ್ಮಣ್ಣ ನಾಯಕ ಕೆರೆ ಬಳಿ ಪಕ್ಷಿಧಾಮ ಸ್ಥಾಪನೆಗೆ ಪ್ರಯತ್ನಿಸಲಾಗುವುದು.

ಥೀಮ್ ಪಾರ್ಕ್ ಸ್ಥಾಪನೆ ಸಂಬಂಧ ಈ ಹಿಂದೆ ಈಗಿನ ಕೇಂದ್ರ ಗೃಹ ಸಚಿವರು ಚಳ್ಳಕೆರೆ ಪ್ರವಾಸದ ವೇಳೆ ಭರವಸೆ ಕೊಟ್ಟಿದ್ದರೆಂದರು.

ಫೆ.9ರಂದು ನೂತನ ಜಿಲ್ಲಾಧ್ಯಕ್ಷ ಎ.ಮುರುಳಿ ಪದಗ್ರಹಣ ಸಮಾರಂಭ ನಡೆಯಲಿದೆ. ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್, ಸಂಸದರು, ಶಾಸಕರು,ಪ್ರಮುಖರು ಭಾಗವಹಿಸಲಿದ್ದಾರೆ.

ಚಿತ್ರದುರ್ಗಕ್ಕೆ ಮತ್ತೊಂದು ಮಂತ್ರಿ ಸಿಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.