ಶಿವಮೊಗ್ಗ: ಮಕ್ಕಳಲ್ಲಿರುವ ಕಲೆಯ ಅನಾವರಣದ ಜತೆಗೆ ಮಕ್ಕಳನ್ನು ಪ್ರೋತ್ಸಾಹಿಸಲು ಚಿತ್ರಕಲಾ ಪ್ರದರ್ಶನ ಅತ್ಯುತ್ತಮ ಆಲೋಚನೆಯಾಗಿದೆ. ದಸರಾ ಸಂದರ್ಭದಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿರುವುದು ಸಮಯೋಚಿತ. ಇದನ್ನು ಗಮನಿಸಿದ ಮೇಲೆ ನಾನೂ ಚಿತ್ರ ಬರೆಯುವುದನ್ನು ಕಲಿಯಬೇಕೆಂಬ ಆಸೆ ಚಿಗುರಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರ ಪಾಲಿಕೆಯಿಂದ ಶಿವಪ್ಪನಾಯಕ ಅರಮನೆಯಲ್ಲಿ ಏರ್ಪಡಿಸಿರುವ ಕಲಾ ದಸರಾದಲ್ಲಿ ಮಂಗಳವಾರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನಗಳು ಎಲ್ಲರ ಮನಸೂರೆಗೊಳ್ಳುತ್ತಿವೆ. ಶಿವಮೊಗ್ಗ ಪರಿಸರದ ದೃಷ್ಟಿಯಿಂದ ಮಹತ್ತರವಾದುದು. ಇಲ್ಲಿ ಅನೇಕ ಜೀವ ಹಾಗೂ ಸಸ್ಯ ಸಂಕುಲವಿದೆ. ಛಾಯಾಚಿತ್ರಗಳನ್ನು ನೋಡಿದರೆ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದರು.
ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್, ನಾನು ಐದು ವರ್ಷಗಳ ಹಿಂದೆ ಫೋಟೋಗ್ರಫಿ ಆರಂಭಿಸಿದೆ. ತಾಳ್ಮೆ ಇದ್ದಾಗ ಮಾತ್ರ ಅತ್ಯುತ್ತಮ ಫೋಟೋ ಕ್ಲಿಕ್ಕಿಸುವುದು ಸಾಧ್ಯ ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, 2012ರಿಂದ ಕಲಾ ದಸರಾ ನಡೆಸಲಾಗುತ್ತಿದೆ. ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಲು ಛಾಯಾಗ್ರಾಹಕರು, ಕಲಾವಿದರು ಕಾರಣ. ನಗರ ಪಾಲಿಕೆಯಿಂದ ಈ ಬಾರಿ ಅತ್ಯುತ್ತಮವಾಗಿ ದಸರಾ ಸಂಘಟಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಉಪಸ್ಥಿತರಿದ್ದರು.