ನ್ಯೂಸ್

ಚಿಕ್ಕಬಳ್ಳಾಪುರ ಡಿಸಿ ಫೇಸ್ ಬುಕ್ ನಕಲಿ ಖಾತೆ ಸೃಷ್ಟಿ, ವಂಚಕರಿಂದ ಹಣಕ್ಕೆ ಬೇಡಿಕೆ

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹೆಸರಿನ Deputy commissioner chikkaballapur ನಕಲಿ ಖಾತೆ ಸೃಷ್ಟಿಸಿ, ಹಣಕ್ಕೆ ಒತ್ತಾಯಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಪ್ರಚಾರ ಸೇರಿ ನಾನಾ ಕಾರಣಗಳಿಗೆ ನಕಲಿ ಖಾತೆಗಳ ಸೃಷ್ಟಿ ಸಾಮಾನ್ಯ. ಆದರೆ, ಇತ್ತೀಚೆಗೆ ಹಣವನ್ನು ಪಡೆಯುವುದಕ್ಕೆ ಬಳಸುತ್ತಿರುವುದು ಹೆಚ್ಚಾಗಿದೆ. ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಹಣವನ್ನು ಸುಲಿಗೆ ಮಾಡಲಾಗುತ್ತಿದೆ. ಗೌಪ್ಯವಾಗಿ ಮೇಸೆಂಜರ್ ನಲ್ಲಿ ಬೇಡಿಕೆಯಿಟ್ಟು, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣವನ್ನು ಹಾಕಿಸಿಕೊಳ್ಳುವುದರಿಂದ ವಂಚನೆ ಪ್ರಕರಣ ಬೇಗ ಬೆಳಕಿಗೆ ಬರುವುದಿಲ್ಲ. ಇನ್ನು ಆತ್ಮೀಯ ಪ್ರಭಾವಿಗಳು, ದೊಡ್ಡವರು, ಗೆಳೆಯರು ಕೇಳುತ್ತಿರುವುದರಿಂದ ಹಣ ಕೊಟ್ಟವರು ಇತರರ ಬಳಿ ಹೇಳಿಕೊಳ್ಳುವುದಿಲ್ಲ. ಇದು ವಂಚನೆ ಹೆಚ್ಚಾಗಲು ಕಾರಣವಾಗಿದೆ.

ಇಲ್ಲಿ ಜಿಲ್ಲಾಡಳಿತದ ಕಾರ್ಯಕ್ರಮ, ಸಭೆ ಮತ್ತು ಸಮಾರಂಭ, ಬೆಳವಣಿಗೆಗಳ ಬಗ್ಗೆ ತಿಳಿಸಲು ಇರುವ Deputy commissioner chikkaballapur ಫೇಸ್ ಬುಕ್ ಅಸಲಿ ಖಾತೆಯಲ್ಲಿನ ಫೋಟೋ, ಪ್ರೊಫೈಲ್ ಮಾಹಿತಿಯನ್ನು ಹಾಕಿ, ಖಾತೆಗೆ ಪ್ರತಿಯಾಗಿ ನಕಲಿ ಖಾತೆಯನ್ನು ಸೃಷ್ಟಿಸಲಾಗಿದೆ. ಹಲವರಿಗೆ ಹಣಕ್ಕೆ ಒತ್ತಾಯಿಸಲಾಗಿದೆ. ಇದು ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಆರ್.ಲತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಸಾರ್ವಜನಿಕರು ಯಾವುದೇ ಕಾರಣಕ್ಕೂ ನಕಲಿ ಖಾತೆಯ ಫ್ರೆಂಡ್ ರಿಕ್ವೆಟ್ ಅಕ್ಸೆಪ್ಟ್ ಮಾಡಬಾರದು. ಹಾಗೆಯೇ ಯಾರೇ ಆಗಲಿ ಕೇಳಿದಾಗ ಹಣವನ್ನು ವರ್ಗಾವಣೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದ್ದಾರೆ.