ಹನೂರು: ಸಮೀಪದ ಬೂದುಬಾಳು ಗ್ರಾಮದ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ದೇಗುಲದಲ್ಲಿ ಕಡೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ನಡೆದವು. ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಬೂದುಬಾಳು ಗ್ರಾಮದ ಶ್ರೀ ವೆಂಕಟರಮಣಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಕಡೇ ಶ್ರಾವಣ ಶನಿವಾರ ವೆಂಕಟರಮಣಸ್ವಾಮಿ ವಿಗ್ರಹಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ದೇಗುಲವನ್ನು ತಳೀರು ತೋರಣದಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ಸ್ವಾಮಿಗೆ ಅಭಿಷೇಕ, ಸಹಸ್ರನಾಮ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ಭಕ್ತರು ಧೂಪ ಹಾಕಿ ಸರತಿ ಸಾಲಿನಲ್ಲಿ ತೆರಳಿ ಸ್ವಾಮಿಯ ದರ್ಶನ ಪಡೆದರು. ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಹರಕೆಹೊತ್ತ ಭಕ್ತರು ಮುಡಿಸೇವೆ ಸಲ್ಲಿಸಿದರು.
ಕಡೇ ಶ್ರಾವಣದ ಹಿನ್ನೆಲೆ ಚಾಮರಾಜನಗರ, ಮಂಡ್ಯ ಸೇರಿದಂತೆ ಈ ಭಾಗದ ಮಾರ್ಟಳ್ಳಿ, ಎಲ್ಲೇಮಾಳ, ಕುರಟ್ಟಿಹೊಸೂರು, ದಿನ್ನಳ್ಳಿ, ದಂಟಳ್ಳಿ, ಹನೂರು, ಕೊಳ್ಳೇಗಾಲ, ಕಾಮಗೆರೆ, ಮಂಗಲ, ಕಣ್ಣೂರು, ಅಚಗಳ್ಳಿದೊಡ್ಡಿ, ಅಜ್ಜೀಪುರ, ರಾಮಾಪುರ, ಬಂಡಳ್ಳಿ, ಸಿಂಗಾನಲ್ಲೂರು ಹಾಗೂ ಇನ್ನಿತರ ಕಡೆಗಳಿಂದ ಬೆಳಗ್ಗೆಯಿಂದ ಸಂಜೆವರೆಗೂ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇಗುಲದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತಲ್ಲದೆ ಹರಕೆ ಹೊತ್ತ ಭಕ್ತರು ಹಾಗೂ ದಾನಿಗಳು ದೇಗುಲದ ಬಳಿ ಪ್ರಸಾದ ವಿತರಿಸಿದರು.
ತೊಂದರೆ ಅನುಭವಿಸಿದ ಭಕ್ತರು: ಕೊಳ್ಳೇಗಾಲದಿಂದ ಬೂದುಬಾಳು ಗ್ರಾಮಕ್ಕೆ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯವಿತ್ತು. ದಿನಕ್ಕೆ 4 ಬಾರಿ ಸಂಚರಿಸುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆ ಕಳೆದ 3 ವರ್ಷದಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ಬಹುತೇಕ ಭಕ್ತರು ಮಂಗಲ ಗ್ರಾಮದಿಂದ ಆಟೋ ಮೂಲಕ ಬೂದುಬಾಳು ಗ್ರಾಮಕ್ಕೆ ತೆರಳಿದರೆ ಕೆಲವು ಭಕ್ತರು 4. ಕಿ.ಮೀ ದೂರ ನಡೆದು ಸಾಗಿದರು. ಇದರಿಂದ ಭಕ್ತರು ಅದರಲ್ಲೂ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಯಿತು.
ಬಸ್ ಸೌಕರ್ಯಕ್ಕೆ ಒತ್ತಾಯ: ಗ್ರಾಮದಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇಗುಲವಿದ್ದು, ಪ್ರತಿ ಶನಿವಾರ ವಿಶೇಷ ಪೂಜೆ ಹಾಗೂ ವರ್ಷಕ್ಕೊಮ್ಮೆ 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ಬಸ್ ಸೌಕರ್ಯ ಇಲ್ಲದೆ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಗ್ರಾಮಸ್ಥರಿಗೂ ಸಮಸ್ಯೆಯಾಗಿದ್ದು, ಈ ಬಗ್ಗೆ ಹಿಂದಿನ ಶಾಸಕ ಆರ್.ನರೇಂದ್ರ ಅವರಿಗೆ ಮನವಿ ಮಾಡಿದ ಪರಿಣಾಮ ಕಳೆದ 4 ವರ್ಷದ ಹಿಂದೆ ಕೊಳ್ಳೇಗಾಲ ಬಸ್ ಘಟಕದಿಂದ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ, ಹಾಲಿ ಶಾಸಕ ಎಂ.ಆರ್.ಮಂಜುನಾಥ್ ಈ ಬಗ್ಗೆ ಗಮನ ನೀಡಿ ಗ್ರಾಮಕ್ಕೆ ಬಸ್ ಸಂಚಾರವನ್ನು ಪುನರಾರಂಭಿಸಬೇಕು ಎಂದು ಗ್ರಾಮದ ರಾಜೇಶ್ ಒತ್ತಾಯಿಸಿದರು.