ನ್ಯೂಸ್

ಚಿಂತಾಮಣಿಯ ರಾಧಾಕೃಷ್ಣಗೆ ಅತ್ಯುತ್ತಮ ರೈತ ಪ್ರಶಸ್ತಿ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 2024ರ ಕೃಷಿ ಮೇಳ ಹಿನ್ನೆಲೆಯಲ್ಲಿ ಸಾಧಕ ಕೃಷಿಕರಿಗೆ ಕೊಡಮಾಡುವ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಪ್ರತಿಷ್ಠಿತ ಪುರಸ್ಕಾರವಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಿ.ಆರ್.ರಾಧಕೃಷ್ಣ ಅವರಿಗೆ ಸಂದಿದೆ.

ಎಲ್ಲ ಪ್ರಶಸ್ತಿಗಳನ್ನು ಮುಂಬರುವ ನ.14ರಿಂದ ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿಮೇಳ-2024ರ ಸಮಾರಂಭದಲ್ಲಿ ವಿತರಿಸಲಾಗುತ್ತದೆ ಎಂದು ಕೃಷಿ ವಿವಿಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಕೊಡಮಾಡುವ ಪ್ರಗತಿಪರ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿಗೆ ವಿವಿಗೆ ಸೇರುವ 10 ಜಿಲ್ಲೆಗಳಾದ ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಎರಡೂ ವರ್ಗದಿಂದ ತಲಾ ಒಬ್ಬರನ್ನು ಆಯ್ಕೆ ಮಾಡಲಾಗಿದೆ.

ವಿವಿಯ ಹತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಎಲ್ಲ ತಾಲೂಕುಗಳಿಗೆ ತಲಾ ಒಬ್ಬ ಯುವ ರೈತ ಹಾಗೂ ಯು ರೈತ ಮಹಿಳೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗಳ ವಿವರ:

* ಎಚ್.ಡಿ.ದೇವೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ: ಸಿ.ಆರ್.ರಾಧಕೃಷ್ಣ, ಚಿಂತಾಮಣಿ ತಾಲೂಕು

* ಡಾ. ಎಂ.ಎಚ್.ಮರೀಗೌಡ ರಾಜ್ಯ ಮಟ್ಟದ ತೋಟಗಾರಿಕೆ ರೈತ: ಎಚ್.ಸಿ.ರೂಪಾ, ಹಾಡೋನಹಳ್ಳಿ, ದೊಡ್ಡಬಳ್ಳಾಪುರ ತಾ.

* ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ: ವಿ.ಎಸ್.ಪ್ರವೀಣ್, ವಗರಹಳ್ಳಿ, ಚನ್ನರಾಯಪಟ್ಟಣ ತಾ.

* ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈ ಮಹಿಳೆ: ವೈ.ಸಿ.ಶಾಂತಮ್ಮ, ಕಗ್ಗಲಹಳ್ಳಿ, ರಾಮನಗರ ತಾ.

* ಡಾ. ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ: ಯು.ಎಂ.ನಾಗವರ್ಮ, ಉಣ್ಣೇನಹಳ್ಳಿ, ಹೊಳೆನರಸೀಪುರ ತಾ.

* ಡಾ. ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತೆ: ಡಾ. ಎಂ.ಶಾಲಿನಿ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ಜಿಕೆವಿಕೆ.