ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಏಕೀಕರಣಗೊಳಿಸಿ ಅದಕ್ಕಾಗಿ ಹೋರಾಡಿದ ಮಹನೀಯರ ಹೆಸರಿನಲ್ಲಿ ನಗರದಲ್ಲಿ 15 ದಿನಕ್ಕೊಂದು ಚಿಂತನ ಮಂಥನ ಕಾರ್ಯಕ್ರಮವನ್ನು ಕರ್ನಾಟಕ ಏಕೀಕರಣ ಟ್ರಸ್ಟ್ ವತಿಯಿಂದ ಆ.10ರಂದು ಬೆಳಗ್ಗೆ 10.30ಕ್ಕೆ ಕಲಾಮಂದಿರದ ಮುಂಭಾಗದ ಚಿಂತನ ಚಾವಡಿಯಲ್ಲಿ ಆಯೋಜಿಸಲಾಗಿದೆ ಎಂದು ರಂಗಕರ್ಮಿ ಎನ್.ಎಸ್.ಗೋಪಿನಾಥ್ ತಿಳಿಸಿದರು.
ಅಂದು ಅಂಕಣಕಾರ ನಾ.ದಿವಾಕರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದೊಂದು ವಿಶಿಷ್ಟ ರೀತಿಯ ಕಾರ್ಯಕ್ರಮವಾಗಿದ್ದು, ಯುವ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ಆಯೋಜಿಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಏಕೀಕರಣ ಕುರಿತು ಅನೇಕರಿಗೆ ಗೊತ್ತಿಲ್ಲ. ಸಮಗ್ರ ಪಠ್ಯ ಪುಸ್ತಕವೂ ಬಂದಿಲ್ಲ. ಹೀಗಾಗಿ ಟ್ರಸ್ಟ್ ಅಂತಹ ಹೋರಾಟಗಾರರ ಬಗ್ಗೆ ವಿದ್ಯಾರ್ಥಿಗಳಿಗಾಗಿ ಈ ಉಪನ್ಯಾಸ ಮಾಲೆ ಆಯೋಜಿಸುತ್ತಿದೆ ಎಂದರು. ರಂಗಕರ್ಮಿಗಳಾದ ಧನಂಜಯ, ಅರಸಿಕೆರೆ ಯೋಗಾನಂದ, ಭಾಸ್ಕರ್ ಇದ್ದರು.